ಜಾಲಿ ರೈಡಿಗೆ ಹೋಗ್ತಿದ್ದ ಕಾರು ನದಿಗೆ ಬಿದ್ದು ಇಬ್ಬರು ಸಾವು, ಮೂವರು ಪಾರು

ಜಾಲಿ ರೈಡಿಗೆ ಹೋಗ್ತಿದ್ದ ಕಾರು ನದಿಗೆ ಬಿದ್ದು ಇಬ್ಬರು ಸಾವು, ಮೂವರು ಪಾರು

ನವದೆಹಲಿ,10:  ಜಾಲಿ ರೈಡ್ ಗೆ ತೆರಳಿದ್ದ ಕಾರೊಂದು ಯಮುನಾ ನದಿಗೆ ಉರುಳಿ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದೆಹಲಿಯ ಯಮುನಾ ಖಾದರ್ ಪ್ರದೇಶದಲ್ಲಿ ನಡೆದಿದೆ.

ದೀಪಕ್ ಜಾಗಿರ್ ಮತ್ತು ಕೃಷ್ಣನ್ ನದಿಗೆ ಬಿದ್ದು ಮೃತಪಟ್ಟವರು. ಇವರಿಬ್ಬರು ಹಾಝ್ ಖಾಸ್ನ ಪೊಲೀಸ್ ಕಾಲೋನಿಯ ನಿವಾಸಿಗಳಾಗಿದ್ದಾರೆ.

ಐವರು ಸ್ನೇಹಿತರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿದ್ದರು. ಜಾಗಿರ್ ವಜೀರಾಬಾದ್‍ನಲ್ಲಿ ಒಂದು ಬಾಡಿಗೆ ಅಪಾರ್ಟ್‍ಮೆಂಟ್‍ನಲ್ಲಿ ವಾಸಿಸುತ್ತಿದ್ದ. ಇವನನ್ನು ಸ್ನೇಹಿತರು ಪಾರ್ಟಿಗೆ ಕರೆದಿದ್ದು, ನಂತರ ಎಲ್ಲಾ ಸ್ನೇಹಿತರು ಸೇರಿ ಸಂಜೆ ಡ್ರಿಂಕ್ಸ್ ಪಾರ್ಟಿ ಮಾಡಿದ್ದಾರೆ. ಮಧ್ಯರಾತ್ರಿ ಸುಮಾರು 1.30 ಕ್ಕೆ ತಮ್ಮ ಸ್ವಂತದ ಸ್ವಿಫ್ಟ್ ಕಾರಿನಲ್ಲಿ ಲಾಂಗ್ ಡ್ರೈವ್ ಮಾಡಲು ಹೊರಟಿದ್ದಾರೆ. ದೀಪಕ್ ಕಾದ್ಯನ್ ಕಾರನ್ನು ಓಡಿಸುತ್ತಿದ್ದನು. ನಂತರ ಯಮುನಾ ಖಾದರ್‍ಗೆ ತಲುಪಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆಕಾಶ್ ಎಂಬಾತ ನದಿಯ ದಂಡೆಗೆ ಹೋಗಲು ಬಯಸಿದ್ದನು. ಅದಕ್ಕಾಗಿ ನದಿಯ ದಂಡೆಗೆ ಹೋಗಲು ದೀಪಕ್ ಕಾರನ್ನು ಚಲಾಯಿಸಿದ್ದಾನೆ. ಆದರೆ ಅಲ್ಲಿ ಮಂಜಿನಿಂದ ಮಾರ್ಗ ಸರಿಯಾಗಿ ಕಾಣದೆ ದಂಡೆಯ ಮೇಲೆ ಹೋಗಿ ಯಮುನಾ ನದಿಗೆ ಕಾರು ಬಿದ್ದಿದೆ. ಕಾರು ನದಿಗೆ ಬಿದ್ದ ತಕ್ಷಣ ಅವರು ಕೂಗಿಕೊಂಡಿದ್ದಾರೆ. ಆದರೆ ಮಂಜು ತುಂಬಿಕೊಂಡಿದ್ದರಿಂದ ಯಾರಿಗೂ ಕಾಣಲಿಲ್ಲ ಕೇಳಿಸಲೂ ಇಲ್ಲ. ಆದ್ದರಿಂದ ಯಾರು ಅವರ ಸಹಾಯಕ್ಕೆ ಹೋಗಲಿಲ್ಲ. ನಸುಕಿನ ಜಾವ ಸುಮಾರು 3.40 ಕ್ಕೆ ಗಸ್ತು ಪೊಲೀಸರು ರೌಂಡ್ಸ್ ಹೋಗುತ್ತಿದ್ದಾಗ ಕಾರು ಬಿದ್ದುರುವುದನ್ನು ನೋಡಿ ಸಹಾಯಕ್ಕೆ ಧಾವಿಸಿದರು ಎಂದು ಪೊಲೀಸರು ಹೇಳಿದರು.

ಕಾರು ನದಿಗೆ ಬಿದ್ದ ತಕ್ಷಣ ಜಾಗಿರ್ ಮತ್ತು ಕೃಷ್ಣನ್ ಗೆ ಪಾರಾಗಲು ಸಾಧ್ಯವಾಗಲಿಲ್ಲ. ಸಂಪೂರ್ಣವಾಗಿ ಮುಳುಗಿ ಹೋಗಿದ್ದರು. ಆದರೆ ನಾನು, ಆನಂದ್ ಹಾಗೂ ಕಾಡಿಯನ್ ಪಾರಾದೆವು ಎಂದು ಆಕಾಶ್ ಪೊಲೀಸರಿಗೆ ತಿಳಿಸಿದ್ದಾನೆ.

ಕೆಲ ದಿನಗಳಿಂದ ದೆಹಲಿಯಲ್ಲಿ ದಟ್ಟ ಮಂಜು ಆವರಿಸುತ್ತಿದ್ದು, ಅಪಘಾತಗಳು ಸಂಭವಿಸುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಈ ದುರ್ಘಟನೆ ನಡೆದಿದೆ.