ಇದು ಕಲಬುರ್ಗಿ ಹಂತಕನ ಸ್ಕೆಚ್; ಗೌರಿ ಹಂತಕನದ್ದಲ್ಲ: ತನಿಖಾಧಿಕಾರಿ ಸ್ಪಷ್ಟನೆ

ಇದು ಕಲಬುರ್ಗಿ ಹಂತಕನ ಸ್ಕೆಚ್; ಗೌರಿ ಹಂತಕನದ್ದಲ್ಲ: ತನಿಖಾಧಿಕಾರಿ ಸ್ಪಷ್ಟನೆ

ಬೆಂಗಳೂರು,ಅ. 05: ಗೌರಿ ಹಂತಕರ ರೇಖಾ ಚಿತ್ರ ಬಿಡುಗಡೆ ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವರದಿ ಸುಳ್ಳು ಎಂದು ತನಿಖಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ರೇಖಾ ಚಿತ್ರವು ಎಂಎಂ ಕಲಬುರ್ಗಿ ಹಂತಕನ್ನದೇ ಹೊರತು ಗೌರಿ ಹಂತಕನದ್ದಲ್ಲ ಎಂದು ತನಿಖಾಧಿಕಾರಿ ಅನುಚೇತ್ ಹೇಳಿದ್ದಾರೆ. ಪೊಲೀಸ್ ಇಲಾಖೆಯು ಗೌರಿ ಹಂತಕರ ರೇಖಾಚಿತ್ರವನ್ನೇ ಬಿಡುಗಡೆ ಮಾಡಿಲ್ಲ. ಈ ರೇಖಾಚಿತ್ರಕ್ಕೂ ಗೌರಿ ಲಂಕೇಶ್ ಹತ್ಯೆ ತನಿಖೆಗೂ ಯಾವುದೇ ಸಂಬಂಧ ಇಲ್ಲ ಎಂದೂ ಡಿಸಿಪಿ ಅನುಚೇತ್ ತಿಳಿಸಿದ್ದಾರೆ.

ಗೌರಿ ಲಂಕೇಶ್ ಪ್ರಕರಣದಲ್ಲಿ ಹಂತಕರ ಸುಳಿವು ಸಿಕ್ಕಿರುವ ಬಗ್ಗೆ ಯಾವುದೇ ಮಾಹಿತಿ ನೀಡದ ತನಿಖಾಧಿಕಾರಿಗಳು, ಗೌರಿ ಹಂತಕರ ಬಂಧನಕ್ಕೆ ನೂರಕ್ಕೆ ನೂರರಷ್ಟು ಪ್ರಾಮಾಣಿಕ ಪ್ರಯತ್ನ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಮೊನ್ನೆಯಷ್ಟೇ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರು ಗೌರಿ ಹಂತಕರ ಸುಳಿವು ಸಿಕ್ಕಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. ಶೀಘ್ರದಲ್ಲೇ ಹಂತಕರನ್ನು ಬಂಧಿಸಲಾಗುತ್ತದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ತನಿಖಾಧಿಕಾರಿ ಅನುಚೇತ್ ಅವರು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಸೆಪ್ಟಂಬರ್ 5ರಂದು ಗೌರಿ ಲಂಕೇಶ್ ಅವರನ್ನು ಅವರ ನಿವಾಸದ ಬಳಿಯೇ ಹಂತಕರು ಗುಂಡಿಟ್ಟು ಕೊಲೆಗೈದಿದ್ದರು. ಸಿಸಿಟಿವಿಯಲ್ಲಿ ದೃಶ್ಯ ರೆಕಾರ್ಡ್ ಆಗಿದೆಯಾದರೂ ಹಂತಕನ ಸುಳಿವು ಇನ್ನೂ ಸಿಕ್ಕಿಲ್ಲ. ಹಂತಕರ ಬೇಟೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.