ಎರಡು ದಿನಗಳ  ಲಾರಿ ಮುಷ್ಕರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ

ಎರಡು ದಿನಗಳ  ಲಾರಿ ಮುಷ್ಕರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ

ನವದೆಹಲಿ, ಅ. 9- ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಿಂದಾಗುವ ತೊಂದರೆ ಹಾಗೂ ರಾಜ್ಯಗಳಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಅನಗತ್ಯ ನಿರ್ಬಂಧ ಸೇರಿದಂತೆ, ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಕರ್ನಾಟಕ ಸೇರಿದಂತೆ, ದೇಶಾದ್ಯಂತ 90 ಲಕ್ಷ ಲಾರಿ ಮಾಲೀಕರು ಹಮ್ಮಿಕೊಂಡಿರುವ ಎರಡು ದಿನಗಳ ಮುಷ್ಕರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರು ಸೇರಿದಂತೆ, ಕರ್ನಾಟಕದಲ್ಲಿ 3 ಲಕ್ಷಕ್ಕೂ ಅಧಿಕ ಲಾರಿಗಳು ಮುಷ್ಕರದಲ್ಲಿ ಪಾಲ್ಗೊಳ್ಳುವ ಮೂಲಕ ಲಾರಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು, ರಾಜ್ಯದಲ್ಲಿ ಲಾರಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಿಗ್ಗೆವರೆಗೂ ನಗರಕ್ಕೆ ಆಗಮಿಸಿದ ಲಾರಿಗಳು ಇಂದು ಸರಕು ಸಾಗಾಣೆಯನ್ನು ವಿಲೇವಾರಿ ಮಾಡುವುದರಲ್ಲಿ ನಿರತವಾದರೆ, ಇನ್ನೂ ಕೆಲವು ಲಾರಿಗಳು ಎಪಿಎಂಪಿ ಯಾರ್ಡ್ ಹಾಗೂ ಟ್ರಕ್ ಟರ್ಮಿನಲ್‌ನಲ್ಲಿ ನಿಂತಿದ್ದವು.
ನಗರ ವ್ಯಾಪ್ತಿಯಲ್ಲಿ ಲಾರಿಗಳ ಸಂಚಾರ ಮಾಮೂಲಿಯಂತಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇಂದು ಯಾವುದೇ ಲಾರಿಗಳು ಹೊರ ರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸದಿದ್ದರೆ, ನಾಳೆ ಸರಕು ಸಾಗಣೆಯ ಮೇಲೆ ವ್ಯತ್ಯಯವಾಗುವ ಸಾಧ್ಯತೆಗಳಿವೆ.
ಅಖಿಲ ಭಾರತ ಮಟ್ಟದಲ್ಲಿ ಲಾರಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಬೆಂಬಲ ವ್ಯಕ್ತಪಡಿಸಿದ್ದೇವೆ. ಆದರೆ ದೀಪಾವಳಿ ಹಬ್ಬ ಇರುವ ಹಿನ್ನೆಲೆಯಲ್ಲಿ ಸರಕು ಸಾಗಾಣಿಕೆ ಯಾವುದೇ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಕೆಲ ಲಾರಿಗಳ ಸಂಚಾರ ನಡೆಸಲಾಗುತ್ತಿದೆ ಎಂದು ಲಾರಿ ಮಾಲೀಕರ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋಪಾಲ್ ಸ್ವಾಮಿ ತಿಳಿಸಿದ್ದಾರೆ.
ಜಿಎಸ್‌ಟಿಯಿಂದ ಲಾರಿ ಮಾಲೀಕರಿಗೆ ಸಮಸ್ಯೆಯಾಗಿದ್ದು, ಟೋಲ್‌ಗಳಲ್ಲಿ ಲಾರಿಗಳಿಗೆ ತೊಂದರೆ ನೀಡುತ್ತಿದ್ದು, ಈ ಸಮಸ್ಯೆಯನ್ನು ಬಗೆಹರಿಸುವಂತೆ ಒಕ್ಕೂಟ ಆಗ್ರಹಿಸಿದೆ. ಅಲ್ಲದೆ, 15 ವರ್ಷ ದಾಟಿದ ಲಾರಿಗಳಿಗೆ ಕೇಂದ್ರ ಸರ್ಕಾರ ಹೊಸ ನೀತಿ ಮಾಡಿರುವುದನ್ನು ಪ್ರತಿಭಟಿಸಿ ಮುಷ್ಕರ ನಡೆಸಲಾಗುತ್ತದೆ ಎಂದರು.
ಅನಿರ್ದಿಷ್ಟಾವಧಿ ಮುಷ್ಕರ
ಕೇಂದ್ರ ಸರ್ಕಾರ ಮತ್ತು ಲಾರಿ ಮಾಲೀಕರ ಸಂಘದ ನಡುವೆ ನಡೆದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಮುಷ್ಕರಕ್ಕೆ ಕರೆ ಕೊಟ್ಟಿದ್ದು, ಲಾರಿ ಮಾಲೀಕರ ಸಂಘಟನೆಗಳಿಗೆ ಜಿಎಸ್‌ಟಿ ಸೇರಿದಂತೆ, ರಾಜ್ಯ ಸರ್ಕಾರದ ತೊಂದರೆಯಿಂದ 2 ಸಾವಿರ ಕೋಟಿಯಷ್ಟು ರೂ. ನಷ್ಟವಾಗುತ್ತಿದ್ದು, ಅದನ್ನು ಭರಿಸಿಕೊಡುವಂತೆ ಎರಡು ದಿನಗಳ ಕಾಲ ತಾತ್ಕಾಲಿಕ ಮುಷ್ಕರ ಹಮ್ಮಿಕೊಂಡಿದ್ದು, ಅದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಣಿಯದಿದ್ದರೆ, ಅನಿರ್ದಾಷ್ಟವಧಿ ಮುಷ್ಕರ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅಖಿಲ ಭಾರತ ಮೋಟಾರ್ ಟ್ರಾನ್‌ಪೋರ್ಟ್ ಕಾಂಗ್ರೆಸ್ ಎಚ್ಚರಿಕೆ ನೀಡಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೀತಿಗಳಿಂದ ಲಾರಿ ಮಾಲೀಕರಿಗೆ ತೊಂದರೆಯಾಗಿದ್ದ, ಇದನ್ನು ಸರಿಪಡಿಸಿಕೊಡುವಂತೆ ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ, ಸಚಿವಾಲಯದೊಂದಿಗೆ ಹಲವು ಬಾರಿ ಮಾತುಕತೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾರಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ರಾಷ್ಟ್ರೀಯ ಹೆಚ್ಚುವರಿ ಉಪಾಧ್ಯಕ್ಷ ಹರೀಶ್ ಸಬರ್ ವಾಲ್ ಹೇಳಿದ್ದಾರೆ.