ನಿಧಿ ಆಸೆಗೆ ಮಗು ಬಲಿ ಕೊಡೋಕೆ ಮುಂದಾಗಿದ್ದವರ ಬಂಧನ

ನಿಧಿ ಆಸೆಗೆ ಮಗು ಬಲಿ ಕೊಡೋಕೆ ಮುಂದಾಗಿದ್ದವರ ಬಂಧನ

ಮೈಸೂರು,ನ.11: ನಿಧಿಗಾಗಿ ಕೇರಳದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಗು ಬಲಿ ಕೊಡಲು ಮುಂದಾಗಿ ತಮ್ಮದಲ್ಲದ ಜಮೀನಿನಲ್ಲಿ ಗುಂಡಿ ತೆಗೆದ ಏಳು ಜನರನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ನೆರಳೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸುಧೀರ್ ಎಂಬಾತ ನಿಧಿಗಾಗಿ ಇಂತಹ ಪ್ಲಾನ್ ಮಾಡಿದ್ದ. ಅದೇ ಗ್ರಾಮದ ಮಹೇಶ್ ಎಂಬುವರ ಜಮೀನಿನಲ್ಲಿ ನಿಧಿ ಇದೆ ಎಂದು ಸುಧೀರ್ ತನ್ನ ಸುಳ್ಯದ ಗೆಳೆಯ ರವೀಂದ್ರ ಹಾಗೂ ಇನ್ನಿತರ ಐದು ಜನರೊಂದಿಗೆ ಹಳ್ಳ ತೆಗೆಯಲು ಜಮೀನಿಗೆ ಹೋಗಿದ್ದಾನೆ.

ಈ ಸಂದರ್ಭದಲ್ಲಿ ರವೀಂದ್ರ ಜೊತೆ 11 ವರ್ಷದ ಮಗು ಕೂಡ ಇತ್ತು. ಅಲ್ಲದೆ ಪೂಜೆಯ ಸಾಮಾಗ್ರಿಗಳು, ಕೇರಳದ ಜ್ಯೋತಿಷ್ಯ ಶಾಸ್ತ್ರದ ಪುಸ್ತಕಗಳು ಹಾಗೂ ಮಾಂತ್ರಿಕ ವಿದ್ಯೆಯ ಸಾಮಾಗ್ರಿಗಳು ಕೂಡ ಇದ್ದವು. ಇವರೆಲ್ಲಾ ಸೇರಿ ಹಳ್ಳ ತೆಗೆಯುವುದನ್ನು ಸ್ಥಳೀಯರು ಗಮನಿಸಿ ನಿಧಿಗಾಗಿ ಮಗು ಬಲಿ ಕೊಡಲಾಗುತ್ತಿದೆ ಎಂದು ಶಂಕಿಸಿ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಕೌವಲಂದೆ ಪೊಲೀಸರು ಸ್ಥಳದಲ್ಲಿದ್ದ 7 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಜಮೀನಿನ ಮಾಲೀಕ ಮಹೇಶ್ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಕೌವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಬಾಲಕನನ್ನು ಹೊರತು ಪಡಿಸಿ 7 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.