8 ದಿನದ ಹಿಂದೆ ಮದ್ವೆಯಾಗಿದ್ದ ಟೆಕ್ಕಿ ಆತ್ಮಹತ್ಯೆ

8 ದಿನದ ಹಿಂದೆ ಮದ್ವೆಯಾಗಿದ್ದ ಟೆಕ್ಕಿ ಆತ್ಮಹತ್ಯೆ

ಬೆಂಗಳೂರು, ನ.9: ಎಂಟು ದಿನಗಳ ಹಿಂದೆ ಮದುವೆಯಾಗಿದ್ದ ನವ ವಿವಾಹಿತೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹರ್ಷಿತಾ (25) ಆತ್ಮ ಹತ್ಯೆಗೆ ಶರಣಾದ ನವ ವಿವಾಹಿತೆ. ಗಂಡನ ಮನೆಯವರು ನೇಣು ಹಾಕಿ, ಕೊಲೆ ಮಾಡಿದ್ದಾರೆ ಅಂತಾ ಹರ್ಷಿತಾಳ ಪೋಷಕರು ಆರೋಪಿಸಿದ್ದು, ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ?
ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಇಟ್ಟಮಡು ನಿವಾಸಿ ಚೇತನ್ ಅವರನ್ನು ಹರ್ಷಿತಾ ಮದುವೆಯಾಗಿದ್ದರು. ಮದ್ದೂರಿನಲ್ಲಿ ನವೆಂಬರ್ 1 ರಂದು ಮದುವೆ ನಡೆದಿತ್ತು. ಹರ್ಷಿತಾ ಪೋಷಕರು ಕೃಷಿಕರಾಗಿದ್ದು ಕಷ್ಟಪಟ್ಟು ಮದುವೆ ಮಾಡಿಕೊಟ್ಟಿದ್ದರು. ಆದರೆ ಗುರುವಾರ ಬೆಳಗ್ಗೆ ಪತಿ ಚೇತನ್ ಮನೆಯಲ್ಲಿ ಹರ್ಷಿತಾ ನೇಣಿಗೆ ಶರಣಾಗಿದ್ದಾರೆ.

ಗಂಡನ ಮನೆಯವರೇ ನೇಣಿನ ಕುಣಿಕೆ ಬಿಚ್ಚಿ ವಿಕ್ಟೋರಿಯಾ ಆಸ್ಪತ್ರೆಗೆ ಹರ್ಷಿತಾ ಅವರನ್ನು ದಾಖಲಿಸಿದ್ದಾರೆ. ಗಂಡನ ಮನೆಯವರು ನೇಣು ಹಾಕಿ, ಕೊಲೆ ಮಾಡಿದ್ದಾರೆ ಎಂದು ಹರ್ಷಿತಾ ಪೋಷಕರು  ಈಗ ಆರೋಪಿಸಿದ್ದಾರೆ.

ಈ ಬಗ್ಗೆ ಹರ್ಷಿತಾ ಸಂಬಂಧಿ ನಂದೀಶ್  ಹರ್ಷಿತಾ ಮಂಡ್ಯದ ಹಳ್ಳಿ ಹುಡುಗಿಯಾಗಿದ್ದು, 5 ವರ್ಷ ಬೆಂಗಳೂರಿನ ಹೆಬ್ಬಾಳ ಪಿಜಿಯಲ್ಲಿದ್ದು ಮಾನ್ಯತಾ ಟೆಕ್ ಪಾರ್ಕ್ ಗೆ ಕೆಲಸಕ್ಕೆ ಹೋಗುತ್ತಿದ್ದಳು. ಆಕೆ ಆತ್ಮಹತ್ಯೆಗೆ ಶರಣಾಗುವ ಹುಡುಗಿಯಲ್ಲ. ನಿನ್ನೆ ನಾವು ಮತ್ತು ಆಕೆಯ ಕುಟುಂಬಸ್ಥರು ದೇವಾಲಯಕ್ಕೆ ಹೋಗಿದ್ದಾಗ ಚೆನ್ನಾಗಿ ಮಾತನಾಡುತ್ತಿದ್ದಳು. ಆದರೆ ಇಂದು ಬೆಳಗ್ಗೆ ನೇಣಿಗೆ ಶರಣಾಗಿರುವ ವಿಚಾರ ತಿಳಿದು ಶಾಕ್ ಆಗಿದೆ ಎಂದು ತಿಳಿಸಿದರು.

ಇದೇ ವೇಳೆ ಇಷ್ಟ ಇಲ್ಲದೆ ಮದುವೆಯಾಗಿದ್ದ ಎನ್ನುವ ಪ್ರಶ್ನೆಗೆ, 6 ತಿಂಗಳ ಹಿಂದೆ ನಿಶ್ಚಿತಾರ್ಥ ನಡೆದು ಮದುವೆ ನಡೆದಿದೆ. ಎರಡು ಕುಟುಂಬಗಳು ಒಪ್ಪಿಗೆ ನೀಡಿಯೇ ಮದುವೆ ನಡೆದಿತ್ತು. ಇಂದು ಬೆಳಗ್ಗೆ 5 ಗಂಟೆಗೆ ಕಾಫಿ ಕುಡಿಯಲೆಂದು ನಾನು ಕೊಠಡಿಯಿಂದ ಹೊರಬಂದಾಗ ಹರ್ಷಿತಾ ನೇಣಿಗೆ ಶರಣಾಗಿದ್ದಾಳೆ ಎಂದು ಗಂಡ ಚೇತನ್ ಹೇಳಿಕೆ ಕೊಟ್ಟಿದ್ದಾರೆ. ಬುಧವಾರ ರಾತ್ರಿ ಏನಾಗಿದೆ ಎನ್ನುವ ವಿಚಾರದ ಬಗ್ಗೆ ತನಿಖೆ ನಡೆದರೆ ಸತ್ಯಾಸತ್ಯತೆ ಹೊರಬರಲಿದೆ ಎಂದು ಅವರು ತಿಳಿಸಿದರು.