ವಿಜಯಪುರ ಶ್ರೀ ಸಿದ್ದೇಶ್ವರ ಬ್ಯಾಂಕನ 14 ಲಕ್ಷ ರೂ. ದರೋಡೆ 

ವಿಜಯಪುರ ಶ್ರೀ ಸಿದ್ದೇಶ್ವರ ಬ್ಯಾಂಕನ 14 ಲಕ್ಷ ರೂ. ದರೋಡೆ 

ವಿಜಯಪುರ,ಡಿ.30 : ವಿಜಯಪುರದ ಪ್ರತಿಷ್ಠಿತ ಸಹಕಾರಿ ಬ್ಯಾಂಕಗಳಲ್ಲೊಂದಾಗಿರುವ ಶ್ರೀ ಸಿದ್ದೇಶ್ವರ ಬ್ಯಾಂಕ್‍ನ 14 ಲಕ್ಷ ರೂ.ಹಣವನ್ನು ಹಾಡುಹಗಲೇ ಖದೀಮರು ಲಪಟಾಯಿಸಿದ ಘಟನೆ ಶನಿವಾರ ವರದಿಯಾಗಿದೆ.
ಶ್ರೀ ಸಿದ್ದೇಶ್ವರ ದೇವಾಲಯದ ಮುಂಭಾಗದಲ್ಲಿರುವ ಶ್ರೀ ಸಿದ್ದೇಶ್ವರ ಬ್ಯಾಂಕ್ ಮುಖ್ಯ ಶಾಖೆಯಿಂದ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ಗೆ ಡಿಫಾಸಿಟ್ ಮಾಡಲು ಮೂರು ಟ್ರಂಕ್‍ಗಳಲ್ಲಿ ಸಾಗಾಟ ಮಾಡುವ ಪ್ರಕ್ರಿಯೆ ನಡೆದಿತ್ತು. ಈ ಸಂದರ್ಭದಲ್ಲಿ ಕಳ್ಳರು ತಮ್ಮ ಕೈಚಳಕ ಪ್ರದರ್ಶಿಸಿ ಸಿನಿಮೀಯ ರೀತಿಯಲ್ಲಿ ಸೆಕ್ಯೂರಿಟಿ ಗಾರ್ಡ್‍ಗಳ ಗಮನವನ್ನು ಬೇರೆಡೆ ಕೇಂದ್ರಿಕರಿಸಿ ಹಣದ ಟ್ರಂಕ್ ಹೊತ್ತುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.  ಹಾಡುಹಗಲೇ ಈ ರೀತಿಯ ಘಟನೆ ನಡೆದಿರುವುದು ಜನರಲ್ಲಿ ಮತ್ತಷ್ಟು ಆತಂಕಗೊಂಡಿದೆ. 
ಸುದ್ದಿ ತಿಳಿಯುತ್ತಿದ್ದಂತೆ ಎಸ್.ಪಿ. ಕುಲದೀಪಕುಮಾರ ಜೈನ್, ಎಎಸ್‍ಪಿ ಡಾ.ಶಿವಕುಮಾರ ಗುಣಾರೆ, ಡಿವೈಎಸ್‍ಪಿ ಡಿ.ಅಶೋಕ ಸೇರಿದಂತೆ ಹಲವಾರು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಘಟನೆ ವಿವರ 
ಬೆಳಿಗ್ಗೆ 11.30 ರ ಸುಮಾರಿಗೆ ಟ್ರಂಕ್‍ನಲ್ಲಿ ವಿಶೇಷ ವಾಹನದ ಮೂಲಕ ಹಣವನ್ನು ಸಾಗಾಟು ಮಾಡುವ ಕಾರ್ಯದಲ್ಲಿ ಸಿಬ್ಬಂದಿ ನಿರತರಾಗಿದ್ದರು. ಆಗ ಚಾಲಾಕಿ ಕಳ್ಳನೊಬ್ಬ ಒಂದಿಷ್ಟು ಹಣವನ್ನು ಅವರ ಪಕ್ಕದಲ್ಲಿಯೇ ಒಗೆದು, ಸೆಕ್ಯೂರಿಟಿ ಗಾರ್ಡ್ ಗಮನವನ್ನು ಅತ್ತ ತಿರುಗಿಸಿ, ಹಣ ಬಿದ್ದಿದೆ ನೋಡಿ, ಸರ್ ತೆಗೆದುಕೊಳ್ಳಿ ಎಂದು ಹೇಳಿ ಆ ಸೆಕ್ಯೂರಿಟಿ ಗಾರ್ಡ್ ಅತ್ತ ಗಮನ ಕೇಂದ್ರಿಕರಿಸಿದ ಕ್ಷಣಾರ್ಧದಲ್ಲಿಯೇ ಕಾರ್ ಬಾಗಿಲು ತೆರೆದು ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ.  ಬ್ಯಾಂಕ್‍ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಎಲ್ಲ ಘಟನೆಗಳು ಚಿತ್ರಿಕೃತವಾಗಿವೆ ಎಂಬ ಮಾಹಿತಿ ಇದೆ. 
ಈಗಾಗಲೇ ಈ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದ್ದು, ಆರೋಪಿಗಳ ಪತ್ತೆಗಾಗಿಯೇ ಡಿವೈಎಸ್‍ಪಿ ಹಾಗೂ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಕುಲದೀಪಕುಮಾರ ಜೈನ್ ತಿಳಿಸಿದರು.