ಅತ್ಯಾಚಾರ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು : ಮಾವಳ್ಳಿ ಶಂಕರ್

ಅತ್ಯಾಚಾರ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು : ಮಾವಳ್ಳಿ ಶಂಕರ್

ವಿಜಯಪುರ,ಜ.1: ಅಪ್ರಾಪ್ತ ಬಾಲಕಿ ಮೇಲೆ ನಡೆದ ಅತ್ಯಾಚಾರ-ಕೊಲೆ ಪ್ರಕರಣ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹದ್ದು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಪರಾಧಿಗಳು ಯಾವುದೇ ಕಾರಣಕ್ಕೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಾರದು. ಈ ಕಾರಣಕ್ಕಾಗಿ ಸರ್ಕಾರ ವಿಶೇಷ ಪ್ರಾಸಿಕ್ಯೂಟರ್ ಹಾಗೂ ವಿಶೇಷ ನ್ಯಾಯಾಧೀಶರನ್ನು ನೇಮಕ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ.ಅಂಬೇಡ್ಕರ ವಾದ) ರಾಜ್ಯ ಘಟಕದ ಅಧ್ಯಕ್ಷ ಮಾವಳ್ಳಿ ಶಂಕರ್ ಆಗ್ರಹಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣವೂ ಹತ್ತರಲ್ಲಿ ಹನ್ನೊಂದಾಗಿ ಧೂಳು ತಿನ್ನುವಂತಾಗಬಾರದು, ಸಂತ್ರಸ್ತ ಬಾಲಕಿ, ನೊಂದ ಕುಟುಂಬಕ್ಕೆ ನ್ಯಾಯ ದೊರಕಬೇಕಿದೆ. ದಲಿತರ ಮೇಲೆ ದೌರ್ಜನ್ಯ, ದಲಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಅನೇಕ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದ್ದಾರೆ, ಅಪರಾಧ ಎಸಗಿದ್ದರೂ ಸಹ ಖುಲಾಸೆಯಾಗಿದ್ದಾರೆ. ಈ ಪ್ರಕರಣವೂ ಆ ರೀತಿಯಲ್ಲಿ ಆಗಬಾರದು ಎಂದರು.

ಹತ್ತು ಮಂದಿ ಆರೋಪಿಗಳಿಗೆ ಶಿಕ್ಷೆ ಆದರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂಬ ಮನೋಭಾವ ಇದೆ. ಈ ಮನೋಭಾವದ ನೆಪದಿಂದಾದಿಗಿಯೇ ಸಾವಿರಾರು ಸಂಖ್ಯೆಯ ಆರೋಪಿಗಳು ಶಿಕ್ಷೆಯಿಂದ ಬಚಾವಾಗುತ್ತಿದ್ದಾರೆ ಎಂದು ಮಾವಳ್ಳಿ ಶಂಕರ ಹೇಳಿದರು.

ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು, ಕೇವಲ ಪರಿಹಾರ ನೀಡಿದರೆ ಸಾಲದು, ಕುಟುಂಬಕ್ಕೆ ನ್ಯಾಯ ಒದಗಿಸಬೇಕಾಗಿರುವುದು ಸರ್ಕಾರದ ಆದ್ಯ ಕರ್ತವ್ಯ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಈ ಪ್ರಕರಣಕ್ಕಾಗಿಯೇ ವಿಶೇಷ ನ್ಯಾಯಾಲಯ, ವಿಶೇಷ ನ್ಯಾಯಾಧೀಶರನ್ನು ಹಾಗೂ ವಿಶೇಷ ಪ್ರಾಸಿಕ್ಯೂಟರ್ (ಅಭಿಯೋಜಕರನ್ನು) ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ಧನ, ಜಮೀನು, ಕೃಷಿ ಭೂಮಿ ಹಾಗೂ ಸರ್ಕಾರಿ ನೌಕರಿ ಒದಗಿಸಬೇಕು ಎಂದು ಆಗ್ರಹಪಡಿಸಿದರು.

ಸಂಘಟನೆಯ ಪ್ರಮುಖರಾದ ಜಿತೇಂದ್ರ ಕಾಂಬಳೆ, ಸಂಜು ಕಂಬಾಗಿ, ಶಂಕರ ಚಲವಾದಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.