ಗೌರಿ ಲಂಕೇಶ ಹತ್ಯೆ ಪ್ರಕರಣ ಸಿಬಿಐಗೆ ಒಪ್ಪಿಸುವಂತೆ ಆಗ್ರಹ 

ಗೌರಿ ಲಂಕೇಶ ಹತ್ಯೆ ಪ್ರಕರಣ ಸಿಬಿಐಗೆ ಒಪ್ಪಿಸುವಂತೆ ಆಗ್ರಹ 

ವಿಜಯಪುರ ಸೆ,08: ಹಿರಿಯ ಪತ್ರಕರ್ತೆ ಗೌರಿ ಲಂಕೇಶ ಹತ್ಯೆಗೈದ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ವೇದಿಕೆ, ವಿಜಯ ಕ್ರಾಂತಿ ಸಂಘಟನೆ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ ವತಿಯಿಂದ ತಹಶೀಲ್ದಾರ ಬಿ.ಎಸ್. ಖಡಕಬಾವಿ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಅದ್ಯಕ್ಷ ಶೇಷರಾವ ಮಾನೆ ಮಾತನಾಡಿ, ಪ್ರಗತಿಪರ ವಿಚಾರವಾದಿ ಹಿರಿಯ ಪತ್ರಕರ್ತೆ, ಗೌರಿ ಲಂಕೇಶ ಅವರನ್ನು ದುಷ್ಕರ್ಮಿಗಳು  ಗುಂಡಿಕ್ಕಿ ಕೊಲೆಗೈದಿರುವದು ದುರದೃಷ್ಟಕರವಾಗಿದೆ. ರಾಜ್ಯದಲ್ಲಿ ಸಾಹಿತಿಗಳು, ಸಂಶೋಧಕರಿಗೆ ಪ್ರಗತಿಪರ ವಿಚಾರವಾದಿಗಳಿಗೆ, ಹೋರಾಟಗಾರರಿಗೆ ರಕ್ಷಣೆ ಇಲ್ಲದಂತಾಗಿದೆ. ಕಾನೂನು ಸುವ್ಯವಸ್ಥೆ ಕುಸಿದಿದ್ದು, ಖ್ಯಾತ ಸಂಶೋಧಕ ಶರಣ ಡಾ.ಎಂ.ಎಂ. ಕಲಬುರ್ಗಿಯವರ ಕೊಲೆಗೈದವರನ್ನು ಇನ್ನು ಬಂಧಿಸುವಲ್ಲಿ ಸರಕಾರ ವಿಫಲವಾಗಿದೆ. ಜನತೆಯ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗಿದ್ದು, ಮಾನವೀಯ ಮೌಲ್ಯಗಳ ಹನನವಾಗುತ್ತಿದೆ. ರಾಜ್ಯದಲ್ಲಿಯ ವಿಚಾರವಾದಿಗಳ, ಹೋರಾಟಗಾರರ ಹತ್ಯೆ ಖಂಡನೀಯ ಎಂದರು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಜಿಲ್ಲಾ ಸಂಚಾಲಕ ಸದಾನಂದ ಮೋದಿ ಹಾಗೂ ವಿಜಯಕ್ರಾಂತಿ ಸಂಘಟನೆಯ ಅಧ್ಯಕ್ಷರು ಹಾಗೂ ನ್ಯಾಯವಾದಿ ದಾನೇಶ ಅವಟಿ ಮಾತನಾಡಿ, ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆಯಾಗಿ ಎರಡು ವರ್ಷಗಳು ಗತಿಸಿದರೂ ಇನ್ನುವರೆಗೆ ಹತ್ಯೆಗೈದವರನ್ನು ಬಂಧಿಸುವಲ್ಲಿ ಸರಕಾರವು ವಿಫಲವಾಗಿದೆ.  ಗೌರಿ ಹತ್ಯೆ ಹಾಗೂ ಕಲಬುಗಿಯವರ ಹತ್ಯೆಗೈದವರನ್ನು ಶೀಘ್ರದಲ್ಲಿ ಬಂಧಿಸಬೇಕೆಂದು ಆಗ್ರಹಿಸಿದರು. 
ಈ ಸಂದರ್ಭದಲ್ಲಿ ಹಯಾತ ರೋಜಿನದಾರ, ಸುನೀಲ ರಾಠೋಡ, ರಮೇಶ ಲಮಾಣಿ, ಗಿರೀಶ ಕುಲಕರ್ಣಿ, ಮಹಾದೇವ ಕದಂ ರಫೀಕ ಮಹಾಲ, ಸಿದ್ದಾರ್ಥ ಐರಸಂಗ, ಮಾರುತಿ ಬೂದಿಹಾಳ, ಆನಂದ ಸಾಗರ, ಕೃಷ್ಣಾ ಅಲಕುಂಟೆ, ಪರಮಾನಂದ ಚಲವಾದಿ, ರಘುನಾಥ ರಾಠೋಡ, ಬಾಬು ಲಮಾಣಿ, ಬಸವರಾಜ ಚಲವಾದಿ, ಚಿದಾನಂದ ಹಿರೇಮಠ, ಸಾಧಿಕ ಶೇಖ, ಸುನೀಲ ರಾಠೋಡ, ವಿಜಯಕುಮಾರ ರತ್ನಾಕರ, ಟೋಪು ಚವ್ಹಾಣ, ಅಯ್ಯಪ್ಪ ದೊಡಮನಿ, ಭಗವಂತ ಹೊನ್ನದ, ಮಹಾದೇವ ನಾಗಠಾಣ, ಮೆಹಬೂಬಸಾಬ ಯರನಾಳ ಇನ್ನಿತರರು ಉಪಸ್ಥಿತರಿದ್ದರು.