ಮುಂಬೈನಲ್ಲಿ ಅಗ್ನಿ ದುರಂತ- ಹುಟ್ಟುಹಬ್ಬ ಆಚರಿಸಿಕೊಳ್ತಿದ್ದ ಮಹಿಳೆ ಸೇರಿ 14 ಮಂದಿ ಸಾವು

ಮುಂಬೈನಲ್ಲಿ ಅಗ್ನಿ ದುರಂತ- ಹುಟ್ಟುಹಬ್ಬ ಆಚರಿಸಿಕೊಳ್ತಿದ್ದ ಮಹಿಳೆ ಸೇರಿ 14 ಮಂದಿ ಸಾವು

ಮುಂಬೈ,29:  ವಾಣಿಜ್ಯ ನಗರಿ ಮುಂಬೈನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ದುರಂತದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ.

ನಗರದ ಲೋವರ್ ಪ್ಯಾರೆಲ್‍ನ ಕಮಲಾ ಮಿಲ್ಸ್ ಕಂಪೌಂಡ್‍ನಲ್ಲಿ ಗುರುವಾರ ತಡರಾತ್ರಿ ಅಗ್ನಿ ದುರಂತ ಸಂಭವಿಸಿದೆ. ಈ ಅವಘಡದಲ್ಲಿ 12 ಮಹಿಳೆಯರು ಸೇರಿದಂತೆ 14 ಮಂದಿ ಸಾವನ್ನಪ್ಪಿದ್ದು, 12 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಾವನ್ನಪ್ಪಿದವರಲ್ಲಿ ಬಹುತೇಕ ಮಹಿಳೆಯರು ರೂಫ್ ಟಾಪ್ ರೆಸ್ಟೊರೆಂಟೊಂದರಲ್ಲಿ ಹುಟ್ಟುಹಬ್ಬ ಆಚರಣೆಗಾಗಿ ಬಂದಿದ್ದರು. ಹುಟ್ಟುಹಬ್ಬ ಆಚರಿಸಿಕೊಳ್ತಿದ್ದ 28 ವರ್ಷದ ಮಹಿಳೆ ಕೂಡ ಸಾವನ್ನಪ್ಪಿದ್ದಾರೆ.

ಸೇನಾಪತಿ ಬಾಪತಿ ಮಾರ್ಗ್ ನ ಈ ಕಟ್ಟಡದಲ್ಲಿ ಗುರುವಾರ ತಡರಾತ್ರಿ 12.30 ಕ್ಕೆ ಮೂರು ಮತ್ತು ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಇಡೀ ಕಟ್ಟಡಕ್ಕೆ ಆವರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಸುಮಾರು 6 ಅಗ್ನಿಶಾಮಕ ವಾಹನ, ನಾಲ್ಕು ವಾಟರ್ ಟ್ಯಾಂಕ್‍ಗಳು, ತುರ್ತು ಆಂಬುಲೆನ್ಸ್, ಪೊಲೀಸ್ ಪಡೆ ಮತ್ತು ರಕ್ಷಣೆ ಪಡೆ ದೌಡಾಯಿಸಿ ಬೆಂಕಿಯನ್ನು ನಂದಿಸುವ ಕಾರ್ಯಚರಣೆಯಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ಅನಾಹುತದಿಂದ ಕಟ್ಟಡದಲ್ಲಿದ್ದ ಸಿಲುಕಿಕೊಂಡ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದ್ದು, ಗಾಯಾಳುಗಳನ್ನು ಸಮೀಪದ ಕೆಇಎಂ ಮತ್ತು ಸಿಯಾನ್ ಆಸ್ಪತ್ರೆಗೆ ರವಾನಿಸಲಾಗಿದೆ.