ಕೌಟುಂಬಿಕ ಕಲಹ: ದಂಪತಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

ಕೌಟುಂಬಿಕ ಕಲಹ: ದಂಪತಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

ಚಿಕ್ಕಬಳ್ಳಾಪುರ, 5: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ 28 ವರ್ಷದ ಮಹೇಶ್ ಹಾಗೂ 24 ವರ್ಷದ ರೂಪಾ ಆತ್ಮಹತ್ಯೆಗೆ ಯತ್ನಿಸಿದ ದಂಪತಿ. ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಘಟನೆಯಿಂದ ತೀವ್ರ ಸುಟ್ಟು ಗಾಯಗಳೊಂದಿಗೆ ಚಿಂತಾಜನಕ ಸ್ಥಿತಿಯಲ್ಲಿರುವ ರೂಪಾ ಹಾಗೂ ಮಹೇಶ್ ರನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಕೊಟ್ಟ ನಂತರ ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯ ಆಸ್ಪತ್ರೆಗೆ ರವಾನಿಸಲಾಗಿದೆ.

ರೂಪಾ ಹಾಗೂ ಮಹೇಶ್ ದಂಪತಿಗೆ ಮದುವೆಯಾಗಿ 10 ತಿಂಗಳು ಆಗಿದ್ದು, ರೂಪಾ ಆರು ತಿಂಗಳ ಗರ್ಭಿಣಿ ಅಂತ ತಿಳಿದುಬಂದಿದೆ. ಚಾಲಕ ವೃತ್ತಿಯಲ್ಲಿರುವ ಗಂಡ ಮಹೇಶ್ ಹಲವು ಬಾರಿ ಕುಡಿದು ಬಂದು ರೂಪಾಳ ಜೊತೆ ಜಗಳ ಮಾಡಿಕೊಂಡಿದ್ದಾನೆ. ಅನೇಕ ಬಾರಿ ಸಂಬಂಧಿಕರು ಇವರಿಬ್ಬರ ನಡುವೆ ರಾಜಿ ಸಂಧಾನ ಕೂಡ ನಡೆಸಿದ್ದರು.

ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.