ಡೆಂಗ್ಯೂ-ಮಲೇರಿಯಾಕ್ಕೆ ಯುವಕ ಬಲಿ :ಜಿಲ್ಲಾಧಿಕಾರಿ ಮನೆ ಎದುರು ಪ್ರತಿಭಟನೆ

ಡೆಂಗ್ಯೂ-ಮಲೇರಿಯಾಕ್ಕೆ ಯುವಕ ಬಲಿ :ಜಿಲ್ಲಾಧಿಕಾರಿ ಮನೆ ಎದುರು ಪ್ರತಿಭಟನೆ

ವಿಜಯಪುರ, ಅ.14: ಡೆಂಗ್ಯೂ ಹಾಗೂ ಮಲೇರಿಯಾ ಜ್ವರಕ್ಕೆ ಬಲಿಯಾದ ಯುವಕನ ಶವವಿಟ್ಟುಕೊಂಡು ನಗರದ ಜಿಲ್ಲಾಧಿಕಾರಿ ನಿವಾಸದ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಅನೌಪಚಾರಿಕ ಶಿಕ್ಷಣ ಸಂಸ್ಥೆ, ಬಿಜಾಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ(ರಿ), ನಗರ ಸ್ಲಂ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ (ರಿ), ಮತ್ತು ಬಾಟ ನಗರ ದರ್ಗಾ ಸ್ಲಂ ಅಭಿವೃದ್ದಿ ಸಮಿತಿ ಜನರು ಬಾಟ ನಗರ ದರ್ಗಾದಲ್ಲಿ ಕಳೆದ ಎರಡು ಮೂರು ತಿಂಗಳಿನಿಂದ ಡೆಂಗು ಹಾಗೂ ಮಲೇರಿಯಾ ಜ್ವರ ಕಾಣಿಸಿಕೊಂಡು ಸತತವಾಗಿ ಈ ಎರಡು ತಿಂಗಳಲ್ಲಿ 8 ಜನ ಯುವಕರು ಈ ಮಾರಕ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದ್ದಾರೆ. ಇನ್ನು 60 ಕ್ಕಿಂತ ಹೆಚ್ಚು ಜನರು ಈ ಜ್ವರದಿಂದ ನರಳುತ್ತಿದ್ದಾರೆ. ಮಹಾನಗರ ಪಾಲಿಕೆಯಾಗಲಿ ಅಥವಾ ಆರೋಗ್ಯ ಇಲಾಖೆಯಾಗಲಿ ಅಲ್ಲಿನ ಸ್ಲಂನಲ್ಲಿ ಆರೋಗ್ಯದ ಬಗ್ಗೆ ಜಾಗೃತಿಯಾಗಲಿ ಅಥವಾ ಡೆಂಗು ಹಾಗೂ ಮಲೇರಿಯಾ ಜ್ವರದ ರಕ್ಷಣೆ ಕುರಿತು ಮುಂಜಾಗೃತಾ ಅರಿವು ಮೂಡಿಸದೇ ಇರುವುದನ್ನು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ರೋಹನ ಬಾಗಡೆ ಎಂಬಾತ ವಿಜಯಪುರದಲ್ಲಿ ಈ ರೋಗ ಗುಣಮುಖವಾಗುದಿಲ್ಲವೆಂದು ವೈಧ್ಯರ ಸಲಹೆ ಮೇರಿಗೆ ಸೋಲ್ಲಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಬಡತನ ಹಾಗೂ ಆರ್ಥಿಕ ಪರಿಸ್ಥಿತಿಯಿಂದಾಗಿ ಸೂಕ್ತ ಚಿಕಿತ್ಸೆ ಒದಗದೇ ಮೃತಪಟ್ಟಿದ್ದ ಆತನ ಶವವನ್ನು ಜಿಲ್ಲಾಧಿಕಾರಿಗಳ ಮನೆಯ ಎದುರು ಇಟ್ಟುಕೊಂಡು ಪ್ರತಿಭಟನೆ ನಡೆಸಲಾಯಿತು.
ದರ್ಗಾ ಭಾಟ ಕಾಲೋನಿಯಲ್ಲಿ ಈ ರೋಗಕ್ಕೆ ತುತ್ತಾದ ಜನರಿಗೆ ರಕ್ಷಣೆ ಮಾಡಬೇಕು. ಮತ್ತು ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು. ಅಲ್ಲದೆ ಈಗ ಡೆಂಗು ಹಾಗೂ ಮಲೇರಿಯಾದಿಂದ ನರಳುತ್ತಿರುವ ಜನರಿಗೆ ಸರಕಾರದಿಂದ ಯೋಗ್ಯವಾದ ಚಿಕತ್ಸೆ ಕೊಡಿಸಬೇಕು. ಇಲ್ಲಿ ವಾಸಿಸುವವರೆಲ್ಲರೂ ಕಡುಬಡವರು ಕಾರಣ ಬೇರೆ ರಾಜ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಆಗುವುದಿಲ್ಲ. ಕಾರಣ ಆರ್ಥಿಕ ಪರಸ್ಥಿತಿ ಸರಿ ಇಲ್ಲ. ಆದ್ದರಿಂದ ಈ ರೋಗಕ್ಕೆ ಆದಷ್ಟು ವಿಜಯಪುರದಲ್ಲಿಯೇ ಚಿಕಿತ್ಸೆ ನೀಡಲು ಇಲ್ಲಿನ ಜಿಲ್ಲಾ ಆರೋಗ್ಯ ಇಲಾಖೆ ವ್ಯವಸ್ಥೆ ಮಾಡಬೇಕೆಂದು ಅಕ್ರಮ ಮಾಶ್ಯಾಳಕರ ಒತ್ತಾಯಿಸಿದರು.
ಈ ಧರಣಿಕಾರರನ್ನು ಸ್ಪಂದಿಸಿದ ಉಪವಿಭಾಗಿಯ ಅಧಿಕಾರಿಗಳು ಸ್ಥಳಕ್ಕ ಆಗಮಿಸಿ ಸಂಬಂಧಿಸಿದ ಇಲಾಖೆಗೆ ಬೇಗನೆ ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ಹೇಳಿದರು. 
ಈ ಸಂದರ್ಭದಲ್ಲಿ ನಿರ್ಮಲಾ ಹೊಸಮನಿ, ಚಂದ್ರು ಆಲಮೇಲ, ಸಿದ್ದಲಿಂಗಯ್ಯಾ ಹಿರೇಮಠ, ಮಿನಾಕ್ಷಿ ಕಾಲೆಬಾಗ, ಇಂದುಬಾಯಿ ರಾಠೋಡ, ಶೋಬಾ ಗಾಯಕವಾಡ, ರಾಕೇಶ ಬಾಟುಂಗೆ, ಜ್ವಾನಿ ಬಾಗಡೆ, ಶನ್ನು ಬಾಗಡೆ ಹಾಗೂ ಭಾಟ  ಕಾಲೋನಿಯ ನೂರಾರು ಜನರು ಪಾಲ್ಗೊಂಡಿದ್ದರು.