ಅಕಾಡೆಮಿ ತೊರೆಯಲು ನಿರ್ಧರಿಸಿದ ಪರುಪಳ್ಳಿ ಕಶ್ಯಪ್

 ಅಕಾಡೆಮಿ ತೊರೆಯಲು ನಿರ್ಧರಿಸಿದ ಪರುಪಳ್ಳಿ ಕಶ್ಯಪ್

ನವದೆಹಲಿ: ರಿಯೋ ಒಲಂಪಿಕ್ಸ್ ನಲ್ಲಿ ಪಿವಿ ಸಿಂಧು ಬೆಳ್ಳಿ ಪದಕ ಪಡೆಯಲು ತರಬೇತಿ ನೀಡಿದ ಕೋಚ್ ಪುಲ್ಲೇಲ ಗೋಪಿಚಂದ್ ಅವರನ್ನು ಇಡಿ ದೇಶವೇ ಹೊಗಳುತ್ತಿದೆ. ಮತ್ತೊಂದೆಡೆ ಮತ್ತೊಬ್ಬ ಷಟಲ್ ಆಟಗಾರ ಪರುಪಳ್ಳಿ ಕಶ್ಯಪ್ ಹೈದರಾಬಾದ್ ನಲ್ಲಿರುವ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ತೊರೆಯಲು ನಿರ್ಧರಿಸಿದ್ದಾರೆ. ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸಬೇಕೆಂದು ಕನಸು ಕಂಡಿದ್ದ 29 ವರ್ಷದ ಕಶ್ಯಪ್ ಗೆ ಗಾಯದ ಸಮಸ್ಯೆಗಳಿಂದಾಗಿ ಪಾಲ್ಗೊಳ್ಳಲಾಗಲಿಲ್ಲ. ಈ ವರ್ಷದ ಮಾರ್ಚ್ ನಲ್ಲಿ ನಡೆದ ಜರ್ಮನ್ ಒಪನ್ ಟೂರ್ನಿಯಲ್ಲಿ ಆದ ಮಂಡಿ ನೋವಿನಿಂದಾಗಿ ಮಲೇಶಿಯಾ ಸೂಪರ್ ಸಿರೀಸ್ ಮತ್ತು ಸಿಂಗಾಪುರ್ ಓಪನ್ ನಲ್ಲೂ ಕಶ್ಯಪ್ ಗೆ ಭಾಗವಹಿಸಲು ಸಾಧ್ಯವಾಗಲಿಲ್ಲ.2014 ರಲ್ಲಿ ಕಾಮನ್ ವೆಲ್ತ್ ಗೇಮ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ಕಶ್ಯಪ್ ಬೆಂಗಳೂರಿನ ಟಾಮ್ ಬ್ಯಾಡ್ಮಿಂಟನ್ ಅಕಾಡೆಮಿಯ ಜಾನ್ ಟಾಮ್ ಅವರ ಬಳಿ ತರಬೇತಿ ಪಡೆಯಲು ನಿರ್ಧರಿಸಿದ್ದಾರೆ.ನಿಮ್ಮ ಈ ನಿರ್ಧಾರವನ್ನು ಗೋಪಿ ಚಂದ್ ಅವರಿಗೆ ತಿಳಿಸಿದ್ದಾರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಶ್ಯಪ್ ನಾನು ಹಿರಿಯ ಆಟಗಾರ, ನನ್ನ ಪರಿಸ್ಥಿತಿಯನ್ನು ಗೋಪಿಚಂದ್ ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಂಬಿದ್ದೇನೆ, ಕಳೆದ ಎರಡು ತಿಂಗಳ ಹಿಂದೆಯೇ ಅಕಾಡೆಮಿ ಬಿಡಲು ನಿರ್ಧರಿಸಿದ್ದೆ ಎಂದು ಕಶ್ಯಪ್ ಹೇಳಿದ್ದಾರೆ.2014 ರಲ್ಲಿ ಮತ್ತೊಬ್ಬ ಆಟಗಾರ್ತಿ ಸೈನಾ ನೆಹ್ವಾಲ್ ಗೋಪಿಚಂದ್ ಅವರ ಅಕಾಡೆಮಿ ಬಿಟ್ಟು ಬೆಂಗಳೂರಿನ ಅರುಣ್ ಕುಮಾರ್ ಎಂಬ ಕೋಚ್ ಬಳಿ ತರಬೇತಿ ಪಡೆಯುತ್ತಿದ್ದಾರೆ.