ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ನಾಮಕರಣ: ನಿಗದಿತ ಸಮಯದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲು ಸೂಚನೆ

ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ನಾಮಕರಣ: ನಿಗದಿತ ಸಮಯದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲು ಸೂಚನೆ

ವಿಜಯಪುರ,ಜೂ.8:    ಇದೇ ಜೂನ್ 11 ರಂದು ನಡೆಯಲಿರುವ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ನಾಮಕರಣ ಕಾರ್ಯಕ್ರಮಕ್ಕೆ ನಿಗದಿತ ಸಮಯದೊಳಗೆ ಸಕಲ ಸಿದ್ಧತೆ ಮಾಡಿಕೊಳ್ಳುವ ಜೊತೆಗೆ ಕಾರ್ಯಕ್ರಮಕ್ಕೆ ಆಗಮಿಸಲಿರುವ ವಿವಿಧ ಜಿಲ್ಲೆಗಳ ಸುಮಾರು 50 ಸಾವಿರಕ್ಕೂ ಹೆಚ್ಚು ಜನರಿಗಾಗಿ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ವಿವಿಧ ಸಮಿತಿಗಳಿಗೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಅವರು ಸೂಚಿಸಿದರು. 

     ಮಹಿಳಾ ವಿಶ್ವವಿದ್ಯಾಲಯದ ಆಡಳಿತ ಭವನದ ಸಭಾಂಗಣದಲ್ಲಿ ವಿವಿಧ ಸಮಿತಿಗಳು ಕೈಗೊಂಡ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದ ಅವರು, ಈ ಕಾರ್ಯಕ್ರಮಕ್ಕಾಗಿ ರಚಿಸಲಾದ ಆಹಾರ ಸಮಿತಿಗಳು, ವೇದಿಕೆ ಹಾಗೂ ಮಂಟಪ ನಿರ್ವಹಣಾ ಸಮಿತಿ, ಸಾರಿಗೆ ಸಮಿತಿ, ವಸತಿ ಸಮಿತಿ, ಸ್ವಚ್ಛತಾ ಹಾಗೂ ನೀರು ಪೂರೈಕೆ ಸಮಿತಿ ಸೇರಿದಂತೆ ವಿವಿಧ ಸಮಿತಿಗಳು ತಕ್ಷಣ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅಂದು ಬರುವ ಜನರಿಗೆ ಯಾವುದೇ ರೀತಿಯ  ತೊಂದರೆಯಾಗದಂತೆ ಸಕಲ ವ್ಯವಸ್ಥೆಗಳನ್ನು ಮಾಡುವ ಜೊತೆಗೆ ಶಿಷ್ಠಾಚಾರದಂತೆ ಗಣ್ಯರನ್ನೂ ಆಹ್ವಾನಿಸಲು ಸಲಹೆ ನೀಡಿ, ಭದ್ರತೆಗೆ ಸಂಬಂಧಪಟ್ಟಂತೆ ಭದ್ರತಾ ಸಮಿತಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು. 

    ಆಹಾರ ಸಮಿತಿ ಮೂಲಕ ಎರಡು ಉಪ ಸಮಿತಿಗಳನ್ನು ತಾಲೂಕಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಬೇಕು. ಆಹಾರ ಇಲಾಖೆಯ ಉಪನಿರ್ದೇಶಕರು ಉಸ್ತುವಾರಿ ವಹಿಸಿಕೊಳ್ಳುವ ಜೊತೆಗೆ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಇತರೆ ಕಾರ್ಯಕರ್ತರ ಮೇಲ್ವಿಚಾರಣೆಯೊಂದಿಗೆ ಊಟದ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ನೂರು ಕೌಂಟರ್‍ಗಳ ಮೂಲಕ ಯಾವುದೇ ಕೊರತೆಯಾಗದಂತೆ ಕ್ರಮ ಕೈಗೊಳ್ಳುವಂತೆ ತಿಳಿಸಿದ ಅವರು, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ  ಜನರ ಅನುಕೂಲಕ್ಕಾಗಿ ಪೇಡ್ ಕ್ಯಾಂಟಿನ್ ಸಹ ತೆರೆಯಲು ಸಲಹೆ ನೀಡಿ,  ತಕ್ಷಣ ಆಹಾರ ಸಮಿತಿ ಅಧ್ಯಕ್ಷರು ಉಪ ಸಮಿತಿಗಳ ಸಭೆ ಕರೆದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

    ಸುಸಜ್ಜಿತವಾದ ವೇದಿಕೆ ನಿರ್ಮಿಸುವ ಜೊತೆಗೆ ಪುಸ್ತಕ ಪ್ರದರ್ಶನ ಸೇರಿದಂತೆ ವಿವಿಧ ಕಡೆ ಮಂಟಪಗಳನ್ನು ನಿರ್ಮಿಸಬೇಕು. ರಾಜ್ಯದ 16 ಜಿಲ್ಲೆಗಳಿಂದ ಆಗಮಿಸುವ ಜನರಿಗಾಗಿ 1300ಕ್ಕೂ ಹೆಚ್ಚು ಬಸ್‍ಗಳನ್ನು ವ್ಯವಸ್ಥೆ ಮಾಡಲಾಗುತ್ತಿದ್ದು, ಬಸ್ ನಿಲುಗಡೆಗೆ ಪ್ರತ್ಯೇಕ ಸ್ಥಳವನ್ನು ಕಾಯ್ದಿರಿಸಬೇಕು. ಸಾರ್ವಜನಿಕ ಕಾರ್ಯಕರ್ತರನ್ನು ನಿಯೋಜಿಸಿಕೊಂಡು ಜನರಿಗೆ ಸೂಕ್ತ ಸೇವೆ ಕಲ್ಪಿಸಬೇಕು. ಕಾರ್ಯಕ್ರಮ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ಸೂಕ್ತ ಅಂಬುಲೆನ್ಸ್ ವ್ಯವಸ್ಥೆ, ಪ್ರಾಥಮಿಕ ಚಿಕಿತ್ಸಾ ಸೇವೆ, ಅಗ್ನಿಶಾಮಕ ಇಲಾಖೆ ವತಿಯಿಂದ ವಾಹನದೊಂದಿಗೆ ಸಿದ್ಧತೆಯಲ್ಲಿರಲು ಸಂಬಂಧಪಟ್ಟ ಸಮಿತಿಗಳಿಗೆ ಸೂಚಿಸಿದರು. 

    ಕಾರ್ಯಕ್ರಮ ಸಂದರ್ಭದಲ್ಲಿ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುವಂತೆ ಸೂಚಿಸಿದ ಅವರು, ತಾತ್ಕಾಲಿಕ ಶೌಚಾಲಯಗಳ ನಿರ್ಮಾಣ, ಮೊಬೈಲ್ ಶೌಚಾಲಯ ನಿರ್ಮಾಣ ಮಾಡುವ ಜೊತೆಗೆ ಸೂಕ್ತ ನೀರಿನ ಸೌಲಭ್ಯವನ್ನು ಕಲ್ಪಿಸಬೇಕು. ಗಣ್ಯರ ವಸತಿಗೆ ಸಂಬಂಧಪಟ್ಟಂತೆ ಲೈಜನ್ ಅಧಿಕಾರಿಗಳನ್ನು ನಿಯೋಜಿಸಿಕೊಂಡು ಅತಿಥಿ ಗಣ್ಯರಿಗೆ ವಸತಿ ಸೌಕರ್ಯ ಸಮರ್ಪಕವಾಗಿ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ ಅವರು, ಒಟ್ಟಾರೆ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳು ಆಯಾ ಸಮಿತಿಗಳ ಅಧ್ಯಕ್ಷರಿಗೆ ಸೂಚನೆ ನೀಡಿದರು. 

    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸುಂದರೇಶಬಾಬು, ಮಹಿಳಾ ವಿವಿ ಉಪಕುಲಪತಿ ಸಬಿಹಾ ಭೂಮಿಗೌಡ, ಕುಲಸಚಿವ ಕೆ.ಪಿ.ಶ್ರೀನಾಥ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಬಿ.ಬೂದೆಪ್ಪ, ಉಪವಿಭಾಗಾಧಿಕಾರಿ ಶಂಕರ ವಣಕ್ಯಾಳ ಸೇರಿದಂತೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳೂ ಉಪಸ್ಥಿತರಿದ್ದರು.