ಆದ್ಯ ಪತ್ರಕರ್ತ ನಾರದರಿಂದ ಪತ್ರಿಕೋಧ್ಯಮ ಪ್ರಶ್ನೆಗಳಿಗೆ ಉತ್ತರ : ರಘುನಂದನಜೀ

ಆದ್ಯ ಪತ್ರಕರ್ತ ನಾರದರಿಂದ ಪತ್ರಿಕೋಧ್ಯಮ ಪ್ರಶ್ನೆಗಳಿಗೆ ಉತ್ತರ : ರಘುನಂದನಜೀ

ವಿಜಯಪುರ,ಜೂ.13: ಪತ್ರಿಕೋದ್ಯಮ ವೃತ್ತಿಯೋ, ಉದ್ಯಮವೋ ಅಥವಾ ಧ್ಯೇಯವೋ ಎಂಬ ಪ್ರಶ್ನೆ ಸಾಕಷ್ಟು ಬಾರಿ ಕಾಡುತ್ತಲೇ ಇದೆ. ಆದ್ಯ ಪತ್ರಕರ್ತ ನಾರದ ಮಹರ್ಷಿಯ ಆದರ್ಶಗಳಿಂದ ಪ್ರೇರಣೆ ಪಡೆದುಕೊಂಡಾಗ ಈ ಪ್ರಶ್ನೆಗೆ ಉತ್ತರ ಹಾಗೂ ಮಾರ್ಗ ದೊರಕುತ್ತದೆ ಎಂದು ಪ್ರಜ್ಞಾಪ್ರವಾಹದ ದಕ್ಷಿಣ ಭಾರತದ ಕ್ಷೇತ್ರಿಯ ಪ್ರಚಾರಕ ರಘುನಂದನಜೀ ಹೇಳಿದರು.

ವಿಜಯಪುರದ ಶುಭಶ್ರೀ ಸಭಾಂಗಣದಲ್ಲಿ ಮಂಥನ ಚಿಂತಕರ ಚಾವಡಿ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಆದ್ಯ ಪತ್ರಕರ್ತ ನಾರದ ಮಹರ್ಷಿ ಜಯಂತೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪತ್ರಿಕೋದ್ಯಮ ಅಷ್ಟೇ ಅಲ್ಲ ವೈದ್ಯಕೀಯ ವೃತ್ತಿ ಸೇರಿದಂತೆ ಹಲವಾರು ವೃತ್ತಿಗಳಿಗೆ ಈ ಪ್ರಶ್ನೆ ಎದುರಾಗುತ್ತಿದೆ. ವೈದ್ಯರು ಸಹ ತಾವು ಮಾಡುವುದು ವೃತ್ತಿಯೋ, ಉದ್ಯಮವೋ ಅಥವಾ ಧ್ಯೇಯವೋ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾರೆ. ಈ ಎಲ್ಲ ಪ್ರಶ್ನೆಗಳಿಗೂ ಮಹರ್ಷಿ ನಾರದನ ಆದರ್ಶಗಳು ಪರಿಹಾರವಾಗಿವೆ ಎಂದು ಅಭಿಪ್ರಾಯಪಟ್ಟರು.

ನಾರದ ಮಹರ್ಷಿ ಆದ್ಯ ಪತ್ರಕರ್ತ. ನಾರದ ಮಹರ್ಷಿ ದೇವಲೋಕಕ್ಕೂ, ದಾನವ ಲೋಕಕ್ಕೂ, ಭುಲೋಕಕ್ಕೂ ಸಂಚರಿಸುತ್ತಿದ್ದರು, ರಾಮನ ಬಳಿಯೂ ಹೋಗುತ್ತಿದ್ದರು, ರಾವಣನ ಬಳಿಯೂ ಹೋಗುತ್ತಿದ್ದರು, ಕಂಸನ ಬಳಿಯೂ ಹೋಗುತ್ತಿದ್ದರು. ಕಂಸನ ಬಳಿ ಹೋದಾಗ ಕಂಸ ಕೆಟ್ಟ ಮಾರ್ಗದಲ್ಲಿ ಸಾಗುತ್ತಿರುವುದನ್ನು ವಿರೋಧಿಸಿದರು. ಎಂತಹ ಕಠಿಣ ಮನಸ್ಕರಲ್ಲಿಯೂ ಪರಿವರ್ತನೆ ಮೂಡಿಸುವ ಶಕ್ತಿ ನಾರದ ಅವರ ಬಳಿ ಇತ್ತು. ನಾರದ ಮಹಿರ್ಷಿ ರಾಮಾಯಣ ಬೋಧಿಸುವ ಮೂಲಕ ರತ್ನಾಕರರಿಗೆ ಮನಪರಿವರ್ತನೆ ಮಾಡಿದರು, ಅದರ ಫಲವಾಗಿಯೇ ರತ್ನಾಕರ ಅವರು ಮುಂದೆ ವಾಲ್ಮೀಕಿಯಾಗಿ ಮಹಾಭಾರತ ಬರೆಯಲು ಸಾಧ್ಯವಾಯಿತು ಎಂದರು. ಆದರೆ ಮಹಿರ್ಷಿ ನಾರದ ಅವರ ಆದರ್ಶಗಳನ್ನು ನಾವು ಅರಿಯದೇ ಅವರನ್ನು ಕೇವಲ ಜಗಳ ಹಚ್ಚುವವರು ಎಂದಷ್ಟೇ ಸೀಮಿತಗೊಳಿಸಿದ್ದೇವೆ, ಅವರು ಎಂದಿಗೂ ಜಗಳ ಹಚ್ಚಲಿಲ್ಲ ಎಂದರು. 

ನಮ್ಮ ನೆಲದವರ ಬಗ್ಗೆ ಏಕೋ ನಮಗೆ ಅಭಿಮಾನ ಕಡಿಮೆ ಇದೆ. ವಿಜ್ಞಾನಿ ಎಂದಾಕ್ಷಣ ಕೆದರಿದ ಕೂದಲು, ಸೂಟು-ಬೂಟು, ದಪ್ಪದಾದ ಕನ್ನಡಕ ಎಂದು ಕಲ್ಪನೆ ಮಾಡಿಕೊಳ್ಳುತ್ತೇವೆ ಹೊರತು ಅಟೋಮಿಕ್ ಎನರ್ಜಿ ಸೃಷ್ಟಿಸಿದ ಕಣಾದ, ಮಹಾನ್ ಗಣಿತತಜ್ಞ ಭಾಸ್ಕರಾಚಾರ್ಯ, ಆರ್ಯಭಟ ಅವರುಗಳ ಚಿತ್ರಗಳು ನಮ್ಮ ಕಣ್ಮುಂದೆ ಬರುವುದೇ ಕಡಿಮೆ ಎಂದರು. 

ಕಾರ್ಲಮಾಕ್ರ್ಸ್ನರನ್ನು, ಮಾವೋವವನ್ನು ರಾಜಕೀಯ ವಿಜ್ಞಾನಿ ಎಂದು ಕರೆಯಲಾಗುತ್ತಿದೆ, ಆದರೆ ರಾಮನಿಗೆ ಮಾತ್ರ ರಾಜಕೀಯ ವಿಜ್ಞಾನಿ ಎಂದು ಕರೆಯುವುದಿಲ್ಲ. ರಾಮ ಒಬ್ಬ ಶ್ರೇಷ್ಠ ರಾಜನ ಜೊತೆಗೆ ಶ್ರೇಷ್ಠ ರಾಜಕೀಯ ವಿಜ್ಞಾನಿ ಕೂಡಾ ಹೌದು. ರಾಮ ರಾಜಕೀಯ ವಿಜ್ಞಾನಿ ಎಂದರೇ ಅನೇಕರು ಸ್ವತ: ರಾಜ್ಯಶಾಸ್ತ್ರ ಅಧ್ಯಾಪಕರು ಸಹ ಆಶ್ಚರ್ಯ ವ್ಯಕ್ತಪಡುತ್ತಾರೆ. ಅವರು ಹೇಗೆ ರಾಜಕೀಯ ವಿಜ್ಞಾನಿಯಾಗಲು ಸಾಧ್ಯ ಎಂದು ಪ್ರಶ್ನಿಸುತ್ತಾರೆ, ಕಾರಣ ಅವರು ರಾಮಾಯಣವನ್ನು ಸರಿಯಾಗಿ ಓದಿಲ್ಲ, ಅರ್ಥೈಸಿಕೊಂಡಿಲ್ಲ. 

ರಾಮ ವನವಾಸಕ್ಕೆ ಹೋದ ಸಂದರ್ಭದಲ್ಲಿ ಭರತ ಅಣ್ಣನ ಬಳಿಗೆ ಹೋಗುತ್ತಾನೆ. ಆಗ ರಾಮ ಭರತನನ್ನು ಸಂತೈಸಿ ಆಡಳಿತ ಸೂತ್ರಗಳನ್ನು ಹೇಳಿಕೊಡುತ್ತಾ ಹೋಗುತ್ತಾರೆ. ಅದರಲ್ಲಿ ಪ್ರಮುಖವಾಗಿ ರಾಮ `ಆಡಳಿತ ಬಂದಾಗ ಎಲ್ಲ ಬಂಧುಗಳು ಹತ್ತಿರವಾಗುತ್ತಾರೆ, ಇದರಿಂದಾಗಿ ಅನೇಕ ತೊಂದರೆ ಎದುರಾಗಬಹುದು. ಅಧಿಕಾರದ ಸಂದರ್ಭದಲ್ಲಿ ನೆಂಟರ ಜೊತೆ ಅಂತರ ಕಾಯ್ದುಕೋ ಎಂದು ಆಡಳಿತ ಪಾಠ ಹೇಳಿಕೊಟ್ಟರು. ಈ ಒಂದು ಮಾತಿನ ಮೂಲಕವೇ ಶ್ರೀರಾಮನ ಆಡಳಿತ ಶೈಲಿಯನ್ನು ತಿಳಿದುಕೊಳ್ಳಬಹುದಾಗಿದೆ ಎಂದರು.

ಪ್ರಜಾಪ್ರಭುತ್ವ ಯಶಸ್ಸಿಯಾಗಲು ಮತದಾರನ ಗುಣಾತ್ಮಕತೆಯೂ ಅವಶ್ಯ. ಈ ಗುಣಾತ್ಮಕತೆಯನ್ನು ತುಂಬುವಲ್ಲಿ ಮಾಧ್ಯಮ ರಂಗದ ಪಾತ್ರ ಪ್ರಮುಖವಾಗಿದೆ. ಸಾಮೂಹಿಕ ಸಂಸ್ಕಾರವನ್ನು ನೀಡುವ ಮಾಧ್ಯಮ ರಂಗ ತೊಡಗಿಸಿಕೊಂಡಿದೆ. ಮಾಧ್ಯಮ ರಂಗ ಅಷ್ಟೇ ಅಲ್ಲದೇ ಶಿಕ್ಷಣ ರಂಗವೂ ಪ್ರಮುಖ, ಇನ್ನೊಂದು ಪರಿವಾರ (ಕುಟುಂಬ) ಮಹತ್ವ. ಪರಿವಾರ ಉತ್ತಮವಾಗಿದ್ದರೆ, ಪರಿವಾರದಲ್ಲಿ ಉತ್ತಮ ಸಂಸ್ಕಾರ ದೊರೆಯುತ್ತಿದ್ದರೆ ತನ್ನಿಂದ ತಾನೇ ಎಲ್ಲ ರಂಗಗಳಲ್ಲಿಯೂ ಪ್ರಾಮಾಣಿಕರು ಜನ್ಮತಾಳುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಮುಖ್ಯ ಅತಿಥಿಯಾಗಿದ್ದ ಸಂಯುಕ್ತ ಕರ್ನಾಟಕ ಮುಖ್ಯ ವರದಿಗಾರ ವಾಸುದೇವ ಹೆರಕಲ್ಲ ಮಾತನಾಡಿ, ನಾರದ ಮಹರ್ಷಿ ಆದರ್ಶಗಳು, ವಿಚಾರಗಳು, ಸ್ತೋತ್ರಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಪ್ರೇರಣೆ ನೀಡುತ್ತವೆ. ನಾರದ ಮಹರ್ಷಿ ಒಬ್ಬ ಶ್ರೇಷ್ಠ ಕವಿ, ಮಹಾನ್ ದೈವಭಕ್ತ ಎಂದರು. ಪತ್ರಕರ್ತರು ಸಮಾಜದ ಆರೋಗ್ಯಕ್ಕೆ ಉತ್ತಮವಾಗಿರುವ ಔಷಧಿಗಳನ್ನು ನೀಡುವ ಡಾಕ್ಟರ್ಗ,ಳಾಗಬೇಕು. ಉತ್ತಮ ಪತ್ರಕರ್ತನಾಗಲು ನಾರದ ಮಹರ್ಷಿಯ ಚಿಂತನೆಗಳಿಂದ ಪ್ರೇರಣೆ ಪಡೆಯಬೇಕು ಎಂದು ಕರೆ ನೀಡಿದರು.

ಶರಣು ಹೀರಾಪುರ, ವಿನೋದಕುಮಾರ ಮಣೂರ, ಸುನೀಲ ಭೈರಾಮಡಗಿ, ಸಂಗನಗೌಡ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.