ಭಾರತದ ಆರ್ಥಿಕತೆಯ ಸುಧಾರಣೆ ಸರ್ಕಾರದ ಆದ್ಯತೆ : ಪ್ರಧಾನಿ ನರೇಂದ್ರ ಮೋದಿ

ಭಾರತದ ಆರ್ಥಿಕತೆಯ ಸುಧಾರಣೆ ಸರ್ಕಾರದ ಆದ್ಯತೆ : ಪ್ರಧಾನಿ ನರೇಂದ್ರ ಮೋದಿ

ಗಾಂಧಿನಗರ  : ಭಾರತವನ್ನು ಭ್ರಷ್ಟಾಚಾರ ಮುಕ್ತವನ್ನಾಗಿಸಲು ಹಾಗೂ ಆಡಳಿತ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿಸಲಾಗುವುದು ಎಂದು ಭರವಸೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರಲು ನಮ್ಮ ಸರ್ಕಾರ ಬದ್ಧವಾಗಿದ್ದು, ಸುಧಾರಣೆಗಳು ಮುಂದುವರೆಸುವುದಾಗಿ ತಿಳಿಸಿದ್ದಾರೆ.  ವೈಬ್ರೆಂಟ್ ಗುಜರಾತ್ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹೂಡಿಕೆಯನ್ನು ಆಕರ್ಷಿಸುವುದು ಹಾಗೂ ಉದ್ಯಮಕ್ಕೆ ಪೂರಕ ವಾತಾವರಣ ನಿರ್ಮಿಸುವುದು ತಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.   ಉದ್ಯಮ ಪ್ರಾರಂಭಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ಅತಿ ಹೆಚ್ಚು ಒತ್ತು ನೀಡುವುದಾಗಿ ಹೇಳಿರುವ ಪ್ರಧಾನಿ ಮೋದಿ, ಭಾರತದ ಆರ್ಥಿಕತೆಯ ಸುಧಾರಣೆಗಳನ್ನು ಮುಂದುವರೆಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.    ದೇಶದ ಆರ್ಥಿಕತೆಯನ್ನು ಸರಿ ದಾರಿಗೆ ತರಲು ನಮ್ಮ ಸರ್ಕಾರ ಕಳೆದ ಎರಡು ವರ್ಷಗಳಿಂದ ಅವಿರತ ಶ್ರಮ ವಹಿಸಿದ್ದು ಜಿಡಿಪಿ ಬೆಳವಣಿಗೆ, ಹಣದುಬ್ಬರ, ವಿತ್ತೀಯ ಕೊರತೆಯನ್ನು, ಚಾಲ್ತಿ ಖಾತೆ ಕೊರತೆ, ವಿದೇಶಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಲು ಸರ್ಕಾರದ ಕ್ರಮಗಳು ನೆರವಾಗಿದೆ. ಭಾರತ ಇಂದು ವಿಶ್ವದ ಆರ್ಥಿಕತೆಗಳಲ್ಲಿ ಉಜ್ವಲ ತಾಣವಾಗಿ ಮಾರ್ಪಟ್ಟಿದ್ದು, ಜಾಗತಿಕ ಬೆಳವಣಿಗೆಯ ಇಂಜಿನ್ ಆಗಿ ಗುರುತಿಸಲ್ಪಟ್ಟಿದೆ ಎಂದು ಮೋದಿ ಹೇಳಿದ್ದಾರೆ. 2014 ರ ಮೇ ತಿಂಗಳಿನಿಂದ 130 ಬಿಲಿಯನ್ ಡಾಲರ್ ವಿದೇಶಿ ನೇರ ಬಂಡವಾಳ ಹರಿದುಬಂದಿದ್ದು, ಭಾರತದ ಆರ್ಥಿಕತೆ ಬಗ್ಗೆ ವಿದೇಶಿ ಹೂಡಿಕೆದಾರರಿಗೆ ವಿಶ್ವಾಸವಿದೆ ಎಂದಿದ್ದಾರೆ ಪ್ರಧಾನಿ.