ರುದ್ರಭೂಮಿ ನಿರ್ಮಾಣಕ್ಕೆ ಗ್ರಾಮಸ್ಥರು ಆಕ್ರೋಶ

ರುದ್ರಭೂಮಿ ನಿರ್ಮಾಣಕ್ಕೆ ಗ್ರಾಮಸ್ಥರು ಆಕ್ರೋಶ

ಮಹಾಲಿಂಗಪುರ, ಏ.5:  ಸಮೀಪದ ಸಂಗಾನಟ್ಟಿ ಗ್ರಾಮದಲ್ಲಿ ರುದ್ರಭೂಮಿ ನಿರ್ಮಿಸಲು ದಾನವಾಗಿ ನೀಡಿದ 10ಗುಂಟೆ ಜಾಗವನ್ನು ಸರ್ಕಾರ ತನ್ನ 
ವಶಕ್ಕೆ ಪಡೆದು ಗ್ರಾಮದ ಬಳಕೆಗೆ ಅವಕಾಶ ಕಲ್ಪಿಸದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಗ್ರಾಮದ ಶ್ರೀಶೈಲ ಮಲ್ಲಪ್ಪ ಉಳ್ಳಾಗಡ್ಡಿ ಸ್ವ ಇಚ್ಛೆಯಿಂದ ದಾನ ಕೊಡುವುದಾಗಿ ನಾಲ್ಕು ತಿಂಗಳು ಹಿಂದೆಯೇ ಮದಭಾಂವಿ 
ಪಿಡಿಓಗೆ ಒಪ್ಪಿಗೆ ಪತ್ರ ಕೊಟ್ಟಿದ್ದು ಸರ್ಕಾರ ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ಜನತೆ ಸುದ್ದಿಗಾರರೊಂದಿಗೆ ಅಳಲು ತೋಡಿಕೊಂಡರು.

ಸುದ್ದಿಗಾರರೊಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಠ್ಠಲ ಮಾಂಗ ಮಾತನಾಡಿ, 
ಸಂಗಾನಟ್ಟಿ ಗ್ರಾಮದಲ್ಲಿ ಪರಿಶಿಷ್ಟರ ಹೊರತಾಗಿ ಬೇರೆ ಜನಾಂಗದವರಿಗೆ ರುದ್ರಭೂಮಿಯ ವ್ಯವಸ್ಥೆ ಇಲ್ಲದ ಕಾರಣ 
ಶ್ರೀಶೈಲ ಉಳ್ಳಾಗಡ್ಡಿ  ತಮ್ಮ ಸ್ವಂತದ 10 ಗುಂಟೆ ಭೂಮಿಯನ್ನು ಎಲ್ಲ ಜನಾಂಗದವರ ಶವ ಸಂಸ್ಕಾರಕ್ಕಾಗಿ ರುದ್ರಭೂಮಿ 
ನಿರ್ಮಿಸಲು ದಾನ ಪತ್ರವನ್ನು 2016ರ ನವೆಂಬರ್ 29 ರಂದು ಸ್ಟ್ಯಾಂಪ್ ಪೇಪರ್‌ನಲ್ಲಿ ಬರೆದು ಕೊಟ್ಟಿದ್ದಾರೆ, ಗ್ರಾಮ ಪಂಚಾಯಿತಿಯ 
ಸಾಮಾನ್ಯ ಸಭೆಯಲ್ಲಿ ಸದರಿ ಭೂಮಿಯನ್ನು ರುದ್ರಭೂಮಿಯ ಉಪಯೋಗಕ್ಕಾಗಿ ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು ಠರಾವು ಪಾಸ್ ಮಾಡಿ 
ತಹಶೀಲ್ದಾರ್ ಮುಧೋಳ ಇವರಿಗೆ 2016ರ ಫೆಬ್ರುವರಿ 11ರಂದು ನಕಲು ಕಳುಹಿಸಲಾಗಿದೆ. ಇಲ್ಲಿಯವರೆಗೆ ಕಂದಾಯ ಇಲಾಖೆ ಅಧಿಕಾರಿಗಳು 
ಈ ಜಾಗವನ್ನು ಪರಿಶೀಲನೆ ಮಾಡಲು ಗ್ರಾಮಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಗಾನಟ್ಟಿ ಗ್ರಾಮಸ್ಥರಾದ ಪರಸಪ್ಪ  ಪೂಜೇರಿ, ಬಸವರಾಜ ನಾಗನೂರ, 
ಯಂಕಪ್ಪ ಪೂಜೇರಿ. ಪರಪ್ಪ ಹುದ್ದಾರ, ಮಾರುತಿ ಇಟ್ನಾಳ, ಪರಪ್ಪ ಉಳ್ಳಾಗಡ್ಡಿ, ಕಲ್ಲಪ್ಪ ಪೂಜಾರಿ, ಮುತ್ತಪ್ಪ ಯಲ್ಲಟ್ಟಿ, ಮುತ್ತಪ್ಪ ನಾಗನೂರ, 
ರಾಚಪ್ಪ ಉಳ್ಳಾಗಡ್ಡಿ, ಶ್ರೀಮಂತ ನಾಗನೂರ, ಹನಮಂತ ಇಟ್ನಾಳ, ಲಕ್ಷ್ಮಣ ಇಟ್ನಾಳ, ಭೀಮಪ್ಪ ಉಳ್ಳಾಗಡ್ಡಿ, ಶ್ರೀಕಾಂತ ತೆಳಗಡೆ, ಗೋಪಾಲ 
ನಡುವಿನಮನಿ ಗ್ರಾಮಕ್ಕೆ ಶೀಘ್ರ ರುದ್ರಭೂಮಿ ನಿರ್ಮಾಣ ಮಾಡಿಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

‘ಈಗಾಗಲೆ ಶವಗಳನ್ನು ನಮ್ಮ ಊರಿನ ಹಳ್ಳದಲ್ಲಿ ದಹನ ಮಾಡಲಾಗುತ್ತಿದೆ, ಜೂನ್, ಜುಲೈ ವೇಳೆಗೆ ಹಳ್ಳಕ್ಕೆ ನೀರು ಬಂದರೆ 
ಶವಗಳನ್ನು ದಹನ ಮಾಡಲು ತೊಂದರೆಯಾಗುತ್ತದೆ, ಕಾರಣ ಸಂಬಂಧಪಟ್ಟ ಅಧಿಕಾರಿಗಳು ಶ್ರೀಶೈಲ ಉಳ್ಳಾಗಡ್ಡಿಯವರು ದಾನಕೊಟ್ಟ ಜಾಗವನ್ನು ಸರ್ಕಾರ 
ಉಪಯೋಗಿಸಿಕೊಂಡು ಆ ಜಾಗದಲ್ಲಿ ಚಿತಾಗಾರ ನಿರ್ಮಿಸಲು ಅನುದಾನ ಕೊಡಬೇಕು, ಸರ್ಕಾರ ಗ್ರಾಮದ ಸಮಸ್ಯೆಗೆ ಸ್ಪಂದಿಸದಿದ್ದರೆ ಬರುವ ಜೂನ್, ಜುಲೈ ತಿಂಗಳಲ್ಲಿ 
ಯಾರಾದರೂ ಸತ್ತರೆ ಶವವನ್ನು ಸಂಬಂಧಿಸಿದ ಕಚೇರಿ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಲಾಗುವುದು’ ಎಂದು ಗ್ರಾಮ ಪಂಚಾಯಿತಿ 
ಸದಸ್ಯ ಸತ್ಯರಾಜು ಎಚ್ಚರಿಕೆ ನೀಡಿದ್ದಾರೆ.

‘ರುದ್ರಭೂಮಿಗಾಗಿ ಜಾಗವನ್ನು ಕೊಡುವ ಮಾಲೀಕರು ತಮ್ಮ ಭೂಮಿಯನ್ನು ಮೊದಲು ಸರ್ಕಾರದ ಹೆಸರಿಗೆ ಖರೀದಿ ಕೊಡಬೇಕು. 
ಅದನ್ನು ನಾವು ಸರ್ಕಾರದ ನಿಯಮಾನುಸಾರ ಖರೀದಿಸಿ ರುದ್ರಭೂಮಿ ನಿರ್ಮಾಣ ಮಾಡಲು ಸರ್ಕಾರದ ಅನುದಾನ ಕೊಡಲಾಗುತ್ತದೆ. 
ಮೊದಲು ಅವರು ಕೊಡುವ ಜಮೀನು ಸರ್ಕಾರದ ಪರವಾಗಿ ಖರೀದಿಯಾಗಬೇಕು. ಈವರೆಗೆ ವಿಷಯ ನನ್ನ ಗಮನಕ್ಕೆ ಬಂದಿಲ್ಲ, 
ಈ ವಿಷಯದ ಬಗ್ಗೆ ಚರ್ಚಿಸಿ ಅಲ್ಲಿ ರುದ್ರಭೂಮಿ ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತೇನೆ’ 
ಎಂದು ಮುಧೋಳ ತಹಶೀಲ್ದಾರ್‌ ಎಸ್.ಎಸ್ ಪೂಜಾರಿ ತಿಳಿಸಿದ್ದಾರೆ.