ಸ್ಮಶಾನ ಅಭಿವೃದ್ದಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ

ಸ್ಮಶಾನ ಅಭಿವೃದ್ದಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ

ವಿಜಯಪುರ, ಜೂ,28: ಜಿಲ್ಲೆಯಲ್ಲಿರುವ 54 ಸ್ಮಶಾನಗಳನ್ನು ಅಭಿವೃದ್ದಿ ಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಬೋಳಚಿಕ್ಕಲಕಿ ಗ್ರಾಮದಲ್ಲಿ ಸುಮಾರು 2000ಜನ ವಸತಿ ಇದ್ದು, ಗ್ರಾಮದಲ್ಲಿ ಸ್ಮಶಾನಕ್ಕೆ 1.33 ಎಕರೆ ಜಾಗ ಮಂಜೂರಾಗಿದ್ದು, ಅಭಿವೃದ್ದಿಪಡಿಸಿ ಕಾರ್ಯಗತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

ತಾಲೂಕಿನ ಅತಾಲಟ್ಟಿ ಗ್ರಾಮದಲ್ಲಿ ಶೌಚಾಲಯಕ್ಕೆ ಬಳಸಲು ನೀರಿನ ಕೊರತೆ ಇರುವುದು ಗಮನಕ್ಕೆ ಬಂದಿದ್ದು. ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ಪರಿಶಿಷ್ಟ ಜಾತಿ-ಪಂಗಡದ ವಿಶೇಷ ನ್ಯಾಯಾಲಯ ಪ್ರಾರಂಭಿಸಲಾಗಿದ್ದು, ಈ ಕೆಲಸದ ಜೊತೆಗೆ ಇನ್ನೂ ಹೆಚ್ಚುವರಿ ಕರ್ತವ್ಯಕ್ಕೆ ಈ ನ್ಯಾಯಾಲಯದ ಸಿಬ್ಬಂದಿಗಳು ಭಾಗವಹಿಸುತ್ತಿರುವುದರಿಂದ ಕೆಲಸದ ಒತ್ತಡದಿಂದ ಪ್ರಕರಣಗಳ ಇತ್ಯರ್ಥಕ್ಕೆ ವಿಳಂಬವಾಗುತ್ತಿದೆ. ವಿಶೇಷ ನ್ಯಾಯಾಲಯದ ಸಿಬ್ಬಂದಿಗಳ ಅನ್ಯ ಕರ್ತವ್ಯವನ್ನು ಕಡಿತಗೊಳಿಸಿ ಕೇವಲ ವಿಶೇಷ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ತೊರವಿ ಗ್ರಾಮದಲ್ಲಿ ಅನಧಿಕೃತ ಮಾಂಸದಂಗಡಿಗಳು ತಲೆ ಎತ್ತುತ್ತಿವೆ. ಈ ಕುರಿತು ಈಗಾಗಲೇ ಎರಡು ಬಾರಿ ಗಮನಕ್ಕೆ ತಂದು ಅವುಗಳನ್ನು ತೆರವುಗೊಳಿಸಲಾಗಿದೆ. ಪಂಚಾಯತಿಗೆ ಮಾಹಿತಿ ನೀಡದೆ ಮತ್ತೆ, ಮತ್ತೇ ಮಾಂಸದಂಗಡಿಗಳು ತೆರೆಯಲಾಗುತ್ತಿದ್ದು ಈ ಕುರಿತಂತೆ ಕ್ರಮ ಕೈಗೊಳ್ಳುವಂತೆ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕರಿಗೆ ಸೂಚಿಸಿ, ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಬಸವನಬಾಗೇವಾಡಿ ತಹಶೀಲ್ದಾರರ ಕಚೇರಿಯಿಂದ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಸದಸ್ಯರೋರ್ವರು ಸಭೆಯ ಗಮನಕ್ಕೆ ತಂದರು. ಅಧಿಕಾರಿಗಳು ರಜೆ ತೆರಳಿರುವ ಸಂದರ್ಭದಲ್ಲಿ  ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣ ಪತ್ರ ವಿಳಂಬವಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕುಲದೀಪಕುಮಾರ ಜೈನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸುಂದರೇಶಬಾಬು, ವಿಶೇಷ ನ್ಯಾಯಾಲಯದ ಸರಕಾರಿ ಅಭಿಯೋಜಕ ಪಾಸ್ತೆ, ಜಾಗೃತಿ ಸಮಿತಿ ಸದಸ್ಯರಾದ ಅಡಿವೆಪ್ಪ ಸಾಲಗಲ್ಲ, ಮಹಾದೇವ ಬನಸೋಡೆ, ಆನಂದ ಔದಿ, ಬಾಳಾಸಾಬ ಹಂಚಿನಾಳ, ಶಿವಾನಂದ ಪಟ್ಟೇದ, ಗಣಪತಿ ಬಾಣಿಕೋಲ, ಅರವಿಂದ ಸಾಲವಾಡಗಿ, ಸುರೇಶ ಮಣೂರ, ಶಶಿಕಾಂತ ಮಾಲಗತ್ತಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿ ಚೌಕಿಮಠ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ  ಉಪನಿರ್ದೇಶಕ ಮಹೇಶ ಪೋತದಾರ ವಂದಿಸಿದರು.