ಜಗತ್ತಿನ ಎಲ್ಲ ಧರ್ಮಗಳು ಶ್ರೇಷ್ಠ: ಡಾ. ಗುಂಜಾಳ

ಜಗತ್ತಿನ ಎಲ್ಲ ಧರ್ಮಗಳು ಶ್ರೇಷ್ಠ: ಡಾ. ಗುಂಜಾಳ

ಧಾರವಾಡ, ಜೂ.27:  ಜಗತ್ತಿನ ಎಲ್ಲ ಧರ್ಮಗಳು ಶ್ರೇಷ್ಠ ಧರ್ಮಗಳಾಗಿವೆ. ಅವು ಹೇಗೆ ಬಂದಿವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಜಗತ್ತಿನ ಯಾವ ಭಾಷೆಯಲ್ಲಿಯೂ ಇಲ್ಲದ ಅನನ್ಯವಾದ ಸಾಹಿತ್ಯ ವಚನ ಸಾಹಿತ್ಯದಲ್ಲಿದೆ. ಶೋಷಣೆ ರಹಿತ, ಸಾಮಾಜಿಕ ಬದಲಾವಣೆಗೆ ಕ್ರಾಂತಿಕಾರಕ ಚಳುವಳಿಯ ಮೂಲಕ ಹುಟ್ಟಿದ್ದು ಬಸವ ಧರ್ಮವಾಗಿದೆ. ಬಸವಣ್ಣನವರು ಮಹಾಮಾನವತಾವಾದಿ. ರಾಷ್ಟ್ರ ಧರ್ಮವಾಗಬೇಕಾಗಿದ್ದ ಬಸವ ಧರ್ಮ-ವಚನ ಧರ್ಮ ಇನ್ನೂ ಸ್ವತಂತ್ರ ಧರ್ಮವೇ ಆಗದೆ ಉಳಿದಿರುವುದು ಒಂದು ದುರಂತ.

ಒಳಪಂಗಡಗಳನ್ನು ಮರೆತು ಲಿಂಗತತ್ವ, ಬಸವತತ್ವದವರು ಒಂದಾಗಬೇಕಾಗಿದೆ. ಇದು ನನ್ನಂತೆ ಅನೇಕ ವಿದ್ವಾಂಸರ ಆಸೆ ಕೂಡ ಆಗಿದೆ ಎಂದು ಲೇಖಕರು, ಪ್ರಗತಿಪರ ಚಿಂತಕರಾದ ರಮಜಾನ ದರ್ಗಾ ಹೇಳಿದರು.  ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ಎಸ್.ಆರ್. ಗುಂಜಾಳ ದತ್ತಿ ಕಾರ್ಯಕ್ರಮ ಅಂಗವಾಗಿ  ಆಯೋಜಿಸಿದ್ದ ಡಾ. ಎಸ್.ಆರ್. ಗುಂಜಾಳ ಅವರ “ವಚನ ಶುದ್ಧೀಕರಣದ ಸೂತ್ರಗಳು” ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.  

ಮುಂದುವರೆದು ಮಾತನಾಡಿದ ಡಾ. ರಮಜಾನ ದರ್ಗಾ ಅವರು, ಹಿಂದೂ ಧರ್ಮವೆನ್ನುವ ಮಹಾಸಾಗರದ ಮಧ್ಯೆ ಲಿಂಗಾಯತ ಧರ್ಮ ಎಂಬ ಸುಂದರ ನಡುಗಡ್ಡೆ ಇದೆ. ನೀವು ಎಚ್ಚರವಹಿಸದಿದ್ದರೆ ಈ ಸಮುದ್ರದ ತೆರೆಗಳು ಬಡಿದು ಬಡಿದು ಅದನ್ನು ಒಂದು ದಿವಸ ಮುಳುಗಿಸುತ್ತವೆ ಎಂದು 1909 ರಲ್ಲಿಯೇ ವಿದ್ವಾಂಸರು ಹೇಳಿದ್ದನ್ನು ಸ್ಮರಿಸಿಕೊಂಡ ಅವರು, ಬಸವಣ್ಣನವರ ಆರ್ಥಿಕ, ಸಾಮಾಜಿಕ, ಸಾಂಸ್ಕøತಿಕ, ದಾರ್ಶನಿಕ ಪರಿಕಲ್ಪನೆಯನ್ನು ಸರಿಯಾಗಿ ಅರಿತುಕೊಂಡು ಅವುಗಳನ್ನು ವೈಜ್ಞಾನಿಕವಾಗಿ ಚಿಂತನೆಯೊಂದಿಗೆ ಅರ್ಥೈಸಬೇಕಾಗಿದೆ. ವಚನ ಶುದ್ಧೀಕರಣ ಎಂದರೆ ನಮ್ಮನ್ನು ನಾವು ನೋಡಿಕೊಳ್ಳುವ ಕನ್ನಡಿಯಾಗಿದೆ.

ಮಧ್ಯಯುಗದ ವಚನ ಸಂಕಲಕಾರರು, 19 ನೇ ಶತಮಾನದ ಶಂಕರಾದಿಯಾಗಿ, 20 ನೇ ಶತಮಾನದ ಡಾ. ಫ.ಗು. ಹಳಕಟ್ಟಿ, ಶಿ.ಶಿ. ಬಸವನಾಳ, ಡಾ. ಆರ್. ಸಿ. ಹಿರೇಮಠ, ಡಾ. ಎಂ.ಎಂ. ಕಲಬುರಗಿ, ಡಾ. ವೀರಣ್ಣ ರಾಜೂರ ಮುಂತಾದ ವಿದ್ವಾಂಸರು ಶ್ರಮವಹಿಸಿ, ತಮ್ಮ ಜೀವನವನ್ನು ಸವೆಸಿ ವಚನಗಳ ಭಂಡಾರವನ್ನೇ ನಮ್ಮ ಕೈಗೆ ಕೊಟ್ಟಿದ್ದಾರೆ. ವಚನ ಭಂಡಾರ ಬಹಳಷ್ಟು ಸಮಸ್ಯೆಗಳಿಂದ, ದೋಷಗಳಿಂದ, ಅವಜ್ಞೆಗಳಿಂದ ಕೂಡಿರುವುದಕ್ಕೆ ಕಳೆದ 800 ವರ್ಷಗಳಿಂದ ಅವುಗಳ ಬಗ್ಗೆ ಗಮನ ಹರಿಸದೇ ನಾವೆಲ್ಲರೂ ಕಾರಣರಾಗಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಈ ದಿಸೆಯಲ್ಲಿ ಡಾ. ಎಸ್.ಆರ್. ಗುಂಜಾಳ ಅವರ ವಚನ ಶುದ್ಧೀಕರಣ ಸೂತ್ರಗಳು ಪುಸ್ತಕ ಶರಣ ಸಾಹಿತ್ಯದ ಉದಾತ್ತ ಕೊಡುಗೆಯಾಗಿದೆ ಎಂದರು. 

ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಚಂದ್ರಕಾಂತ ಬೆಲ್ಲದ ಮಾತನಾಡಿ, ವಚನ ಸಾಹಿತ್ಯಕ್ಕೆ ಕೊಡುಗೆ ನೀಡಿದ ಅನೇಕ ಮಹನೀಯರನ್ನು ಸ್ಮರಿಸಿಕೊಂಡು ಡಾ. ಎಸ್.ಆರ್. ಗುಂಜಾಳ ಅವರ ಕೊಡುಗೆ ಶ್ಲಾಘನೀಯ ಎಂದರು.  
ವೇದಿಕೆ ಮೇಲೆ ಸಂಘದ ಉಪಾಧ್ಯಕ್ಷ ಶಿವಣ್ಣ ಬೆಲ್ಲದ ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿ ಸದಸ್ಯ ರಾದ ಸತೀಶ ತುರಮರಿ, ಮನೋಜ ಪಾಟೀಲ ಅತಿಥಿಗಳನ್ನು ಗೌರವಿಸಿದರು.  86 ನೇ ಜನ್ಮದಿನದ ನಿಮಿತ್ತ ಕೃತಿಕಾರ ಡಾ. ಎಸ್.ಆರ್. ಗುಂಜಾಳ ಅವರನ್ನು ಅನೇಕರು ಅಭಿನಂದಿಸಿ ಗೌರವಿಸಿದರು. 

ಸಂಘದ ಕಾರ್ಯಾಧ್ಯಕ್ಷ ಡಾ. ಡಿ.ಎಂ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ  ಕಾರ್ಯಕ್ರಮ ನಿರ್ವಹಿಸಿದರು. ಸಹ ಕಾರ್ಯದರ್ಶಿ ಶಿವಾನಂದ ಭಾವಿಕಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ   ಡಾ. ವೀರಣ್ಣ ರಾಜೂರ, ವಸಂತ ಪತ್ತಾರ, ಸಿದ್ಧರಾಮ ನಡಕಟ್ಟಿ, ಎಸ್.ಎಚ್. ಮಿಟ್ಟಲಕೋಡ, ವೆಂಕಟೇಶ ಕುಲಕರ್ಣಿ, ಎಸ್.ಡಿ.ರತ್ನಾಕರ, ಪ್ರೊ. ವೀರಣ್ಣ ಒಡ್ಡೀನ,  ಮೋಹನ ಮೋರೆ, ಜಿ.ಆರ್. ತೊಗ್ಗಿ, ಸಿ.ಬಿ. ಹೊಸಕೋಟಿ, ಮಾರ್ಕಂಡೇಯ ದೊಡಮನಿ, ಸಿ.ಜಿ. ಹಿರೇಮಠ, ರುದ್ರಣ್ಣ ಚಿಲುಮಿ, ಮಹಾಂತೇಶ ನರೇಗಲ್ಲ, ಸುರೇಶ ಹೊರಕೇರಿ, ಈರಣ್ಣ ಹೊಸಕುಂಬಾರ, ಶಿಂಧೆ, ಶ್ರೀಮತಿ ಜಯಶ್ರೀ ಬೆಳಲದವರ, ಸೇರಿದಂತೆ ಅನೇಕರು ಭಾಗವಹಿಸಿದ್ದರು.