ಹಿಂದೂಗಳಿಗೆ ಹೋಳಿ ಹಬ್ಬದ ಶುಭ ಕೋರಿದ ಪಾಕ್ ಪ್ರಧಾನಿ

ಹಿಂದೂಗಳಿಗೆ ಹೋಳಿ ಹಬ್ಬದ ಶುಭ ಕೋರಿದ ಪಾಕ್ ಪ್ರಧಾನಿ

ಕರಾಚಿ : ಪಾಕ್‌ನಲ್ಲಿರುವ ಹಿಂದೂ ಸಮುದಾಯಕ್ಕೆ ಹೋಳಿ ಹಬ್ಬದ ಶುಭಾಶಯ ಕೋರಿದ ಬಳಿಕ ಅವರು ಮಾತನಾಡುತ್ತಿದ್ದರು.  ಹಿಂದೂಗಳು ಆಯೋಜಿಸಿದ್ದ ಹೋಳಿ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಯಾರು ನರಕಕ್ಕೆ ಹೋಗಬೇಕು, ಯಾರು ಸ್ವರ್ಗಕ್ಕೆ ಹೋಗಬೇಕು ಎಂದು ನಿರ್ಧರಿಸುವುದು ಯಾರ ಕೆಲಸವೂ ಅಲ್ಲ, ಆದರೆ ಪಾಕಿಸ್ತಾನವನ್ನು ಭೂಮಿಯ ಮೇಲಿನ ಸ್ವರ್ಗವಾಗಿಸುವುದು ನಮ್ಮ ಕೆಲಸ ಎಂದು ಷರೀಫ್‌ ನುಡಿದರು.

ಬಲವಂತದ ಮತಾಂತರ ಹಾಗೂ ಅನ್ಯ ಧರ್ಮಗಳ ಪೂಜಾ ಸ್ಥಳಗಳನ್ನು ನಾಶಪಡಿಸುವುದು ಇಸ್ಲಾಂನಲ್ಲಿ ಅಪರಾಧವಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್‌ ಹೇಳಿದ್ದಾರೆ.  ಪಾಕಿಸ್ತಾನದ ಅಲ್ಪಸಂಖ್ಯಾತರಿಗೆ ಅಭಯ ನೀಡಿದ ಅವರು, 'ನಿರ್ದಿಷ್ಟ ಧರ್ಮವನ್ನೇ ಸ್ವೀಕರಿಸಬೇಕೆಂದು ಯಾರನ್ನೂ ಬಲವಂತ ಮಾಡಲಾಗದು' ಎಂದು ಷರೀಫ್ ಹೇಳಿದರು. 'ಇಸ್ಲಾಂ ಪ್ರತಿಯೊಬ್ಬ ಮನುಷ್ಯನನ್ನೂ ಆತನ ಜಾತಿ, ಪಂಗಡ ಅಥವಾ ಧರ್ಮವನ್ನು ನೋಡದೆ ಗೌರವಿಸುತ್ತದೆ. ಯಾರೊಬ್ಬರನ್ನೂ ಬಲವಂತವಾಗಿ ಮತಾಂತರಿಸುವುದು ಅಪರಾಧವಾಗುತ್ತದೆ. ಪಾಕಿಸ್ತಾನದ ಅಲ್ಪಸಂಖ್ಯಾತರ ಪೂಜಾಸ್ಥಳಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ' ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಹಿಂದೂ ಸಮುದಾಯದ ಪ್ರಮುಖರು ಹಾಗೂ ಅಲ್ಪಸಂಖ್ಯಾತ ಸಂಸದರು ಪಾಲ್ಗೊಂಡಿದ್ದರು. 'ಪಾಕಿಸ್ತಾನದಲ್ಲಿ ಧರ್ಮಕ್ಕಾಗಿ ಹೋರಾಟ ನಡೆಯುತ್ತಿಲ್ಲ. ಇಲ್ಲಿ ಭಯೋತ್ಪಾದನೆ ವಿರುದ್ಧ ಮಾತ್ರ ಹೋರಟ ನಡೆಯುತ್ತದೆ. ಭಯೋತ್ಪಾದಕರು ಮತ್ತು ಧರ್ಮದ ಹೆಸರು ಹೇಳಿ ಜನರನ್ನು ದಾರಿತಪ್ಪಿಸುವ ಮತ್ತು ಅಮಾಯಕರ ಕೊಲೆ ಮಾಡುವ ದುಷ್ಕರ್ಮಿಗಳ ವಿರುದ್ಧ ಮಾತ್ರ ಹೋರಾಟ ನಡೆಯುತ್ತದೆ. ಈ ಶಕ್ತಿಗಳು ನಮ್ಮ ದೇಶದ ಸಮೃದ್ಧಿಯನ್ನು ಬಯಸುತ್ತಿಲ್ಲ' ಎಂದು ನುಡಿದರು. ಪಾಕಿಸ್ತಾನ ಯಾವುದೇ ಧರ್ಮದ ವಿರುದ್ಧವಾಗಿ ಜನ್ಮತಾಳಿಲ್ಲ. ಯಾವುದೇ ಧರ್ಮವನ್ನು ಕೀಳು ಎಂದು ಪರಿಗಣಿಸುವುದು ತಪ್ಪು. ಯಾವುದೇ ಧರ್ಮದ ವ್ಯಕ್ತಿ ಮತ್ತು ಆತನ ಕುಟುಂಬಕ್ಕೆ ಇಲ್ಲಿ ಅಭಿವೃದ್ಧಿಗೆ ಸಮಾನ ಅವಕಾಶವಿದೆ. ಇಲ್ಲಿ ಪ್ರತಿಯೊಬ್ಬರಿಗೂ ಶಾಂತಿ ಮತ್ತು ರಕ್ಷಣೆಯಿದೆ' ಎಂದು ಪ್ರಧಾನಿ ಷರೀಫ್‌ ಭರವಸೆ ನೀಡಿದರು.