ಮುಸ್ಲಿಂ ಅಲ್ಪ ಸಂಖ್ಯಾತರೆಂಬ ಮಾನ್ಯತೆಯನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು : ಗಿರಿರಾಜ್ ಸಿಂಗ್

ಮುಸ್ಲಿಂ ಅಲ್ಪ ಸಂಖ್ಯಾತರೆಂಬ ಮಾನ್ಯತೆಯನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು : ಗಿರಿರಾಜ್ ಸಿಂಗ್

ಲಖನೌ :  ಮುಸ್ಲಿಂ ಸಮುದಾಯಕ್ಕೆ ನೀಡಲಾದ ಅಲ್ಪಸಂಖ್ಯಾತ ಮಾನ್ಯತೆಯನ್ನು ಪರಿಶೀಲನೆಗೊಳಪಡಿಸಬೇಕಿದೆ ಎಂಬ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರ ಹೇಳಿಕೆ ವಿವಾದಕ್ಕೀಡಾಗಿದೆ.  ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಇಂದು ದೇಶದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಏರಿಕೆಯಾಗುತ್ತಿದೆ. ಹಾಗಾಗಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗಿರುವ ಅಲ್ಪ ಸಂಖ್ಯಾತರೆಂಬ ಮಾನ್ಯತೆಯನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು ಎಂದು ಹೇಳಿದ್ದಾರೆ. 

ಅಲ್ಪ ಸಂಖ್ಯಾತ ಸ್ಥಾನಗಳ ಕುರಿತು ಹೊಸದಾಗಿ ಚರ್ಚೆ ನಡೆಯಬೇಕಿದೆ. 20 ಕೋಟಿಗೂ ಹೆಚ್ಚಿರುವವರು ಅಲ್ಪಸಂಖ್ಯಾತ ಜನ ಹೇಗಾಗುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಪ್ಯೂ ರಿಸರ್ಚ್ ಸೆಂಟರ್ ವರದಿಯನ್ನು ಶೇರ್ ಮಾಡಿರುವ ಅವರು ಅಲ್ಪಸಂಖ್ಯಾತರ ಕುರಿತು ಹೊಸ ಚರ್ಚೆಗೆ ಕರೆ ನೀಡಿದ್ದಾರೆ.  ಮುಸಲ್ಮಾನರ ಜನಸಂಖ್ಯೆ ವಿಶ್ವದಾದ್ಯಂತ ಶರವೇಗದಲ್ಲಿ ಹೆಚ್ಚಾಗುತ್ತಿದ್ದು, ಇದೇ ರೀತಿಯಲ್ಲಿ ವೃದ್ಧಿಯಾದರೆ 2050ರೊಳಗೆ ಭಾರತ ಜಗತ್ತಿನಲ್ಲಿಯೇ ಅತೀದೊಡ್ಡ ಮುಸ್ಲಿಂ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂಬ ವರದಿಯನ್ನು ಈ ಹಿಂದೆ ಅಮೆರಿಕದ ಪ್ಯೂ ರಿಸರ್ಚ್ ಸೆಂಟರ್ ಬಹಿರಂಗಪಡಿಸಿತ್ತು.