ಜಾಮೀನು ರಹಿತ ವಾರೆಂಟ್, ಮೂವರಿಗೆ ಸಮನ್ಸ್

ಜಾಮೀನು ರಹಿತ ವಾರೆಂಟ್, ಮೂವರಿಗೆ ಸಮನ್ಸ್

ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಫ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಬ್ರಿಟನ್ ಪ್ರಜೆ ಕ್ರಿಶ್ಚಿಯನ್ ಮೈಕೆಲ್ ಜೇಮ್ಸ್ ಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದ್ದು, ಒಂದು ಸಂಸ್ಥೆ ಹಾಗು ಇನ್ನು ಇಬ್ಬರಿಗೆ ಸಮನ್ಸ್ ಜಾರಿ ಮಾಡಲಾಗಿದೆ.  ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ನ ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಮೈಕೆಲ್ ಜೇಮ್ಸ್ ಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ್ದಾರೆ. ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ದೆಹಲಿ ಮೂಲದ ಮೀಡಿಯಾ ಎಕ್ಸಿಮ್ ಲಿಮಿಟೆಡ್ ಸಂಸ್ಥೆ, ಸಂಸ್ಥೆಯ ನಿರ್ದೇಶಕರಾದ ಆರ್ ಕೆ ನಂದಾ, ಮಾಜಿ ನಿರ್ದೇಶಕ ಜೆಬಿ ಸುಬ್ರಹ್ಮಣ್ಯಂ ಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ಎ) ಯಡಿ ಹಣ ಸೆಕ್ಷನ್ 45 ರ ಪ್ರಕಾರ ಸಮನ್ಸ್ ಜಾರಿ ಮಾಡಲಾಗಿದೆ.  ಹಗರಣದ ಆರೋಪಿಗಳಿಗೆ ಫೆ.22 ರೊಳಗೆ ಕೋರ್ಟ್ ಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಹೆಚ್ಚುವರಿ ಚಾರ್ಜ್ ಶೀಟ್ ದಾಖಲಿಸಿದ ನಂತರ ವಿಶೇಷ ನ್ಯಾಯಾಲಯ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿದೆ. ಚಾರ್ಜ್ ಶೀಟ್ ನಲ್ಲಿ ಕ್ರಿಶ್ಚಿಯನ್ ಮೈಕೆಲ್ ಹಾಗೂ ಮೂವರ ವಿರುದ್ಧ ಆರೋಪ ಮಾಡಲಾಗಿತ್ತು.