ಕಲಾಪವನ್ನು ಮಧ್ಯಾಹ್ನ 1 ಗಂಟೆಗೆ  ಮುಂದೂಡಿಕೆ

ಕಲಾಪವನ್ನು ಮಧ್ಯಾಹ್ನ 1 ಗಂಟೆಗೆ  ಮುಂದೂಡಿಕೆ

ಚೆನ್ನೈ,  ನೂತನ ಮುಖ್ಯಮಂತ್ರಿ ಪಳನಿ ಸ್ವಾಮಿಯವರ ಸರ್ಕಾರದ ಬಹುಮತ ಸಾಬೀತು ಕಲಾಪದ ವೇಳೆ,  ಪ್ರಮುಖ ಪ್ರತಿಪಕ್ಷವಾದ ಡಿಎಂಕೆ ಸದಸ್ಯರು ತಮ್ಮ ಆಸನಗಳ ಮುಂದಿದ್ದ ಮೈಕುಗಳನ್ನು ಕಿತ್ತು ಹಾಕಿ, ಮೇಜುಗಳನ್ನು ಉರುಳಿ ದಾಂಧಲೆ ನಡೆಸಿದ ಹಿನ್ನೆಲೆಯಲ್ಲಿ, ಕಲಾಪವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಲಾಗಿದೆ. ತಮಿಳುನಾಡಿನಲ್ಲಿ ನಡೆದ ರೆಸಾರ್ಟ್ ರಾಜಕಾರಣದ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕು ಹಾಗೂ ಗೌಪ್ಯ ಮತದಾನಕ್ಕೆ ಅನುಮತಿ ನೀಡಬೇಕೆಂದು ಕೋರಿ ಡಿಎಂಕೆ ಪಕ್ಷದ ಶಾಸಕರು ತಮ್ಮ ನಾಯಕ ಸ್ಟಾಲಿನ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಇದಕ್ಕೆ ಸ್ಪೀಕರ್ ಒಪ್ಪದೇ ಬಹುಮತ ಸಾಬೀತು ಪ್ರಕ್ರಿಯೆಗೆ ಚಾಲನೆ ನೀಡಿದರು. ಇದು ಡಿಎಂಕೆ ಶಾಸಕರನ್ನು ಕೆರಳಿಸಿತು. ಅವರು ಗೌಪ್ಯ ಮತದಾನಕ್ಕೆ ಆಗ್ರಹಿಸುತ್ತಿದ್ದರೂ, ಸ್ಪೀಕರ್ ಅವರು ಮೊದಲಿಗೆ ವಿಧಾನಸಭೆಗೆ ಹಾಜರಾಗಿರುವ ಶಾಸಕರ ಲೆಕ್ಕ ಆರಂಭಿಸಿದರು. ಆರು ಹಂತಗಳಲ್ಲಿ ಮತದಾರರನ್ನು ಎಣಿಕೆ ಕಾರ್ಯ ನಡೆಸಲು ಶುರು ಮಾಡಿದರು.

ಇದರ ಮೊದಲ ಹಂತದಲ್ಲಿ 38 ಶಾಸಕರು ಪಳನಿ ಸ್ವಾಮಿಯವರ ಸರ್ಕಾರಕ್ಕೆ ಬೆಂಬಲ ಸೂಚಿಸಿದರು. ಹೀಗೆ, ಬಹಿರಂಗವಾಗಿ ಮತದಾನ ನಡೆಯುತ್ತಿರುವುದನ್ನು ಆಕ್ಷೇಪಿಸಿದ ಡಿಎಂಕೆ ಸದಸ್ಯರು, ಸದನದಲ್ಲಿ ಗದ್ದಲ ನಡೆಸಿದರು. ಸದನದ ಆಸನಗಳ ಮುಂದಿದ್ದ ಮೈಕು, ಕುರ್ಚಿ, ಮೇಜುಗಳನ್ನು ಉರುಳಿದಿ ದಾಂಧಲೆ ನಡೆಸಿದರು. ಈ ಗದ್ದಲ ವಿಪರೀತಕ್ಕೆ ಹೋಗಿದ್ದರಿಂದಾಗಿ ಸದನವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಲಾಗಿದೆ.    ಶನಿವಾರ ಬೆಳಗ್ಗೆ ನೂತನ ಮುಖ್ಯಮಂತ್ರಿ ಪಳನಿ ಸ್ವಾಮಿಯವರ ಸರ್ಕಾರದ ಬಹುಮತ ಪರೀಕ್ಷೆ ಬೆಳಗ್ಗೆ 11:30 ಗಂಟೆಗೆ ಆರಂಭವಾಗಿತ್ತು. ತಲೆ ಎಣಿಸುವ ಮೂಲಕ ಮತಗಣನೆಗೆ ಸ್ಪೀಕರ್ ಮುಂದಾಗಿದ್ದರು. ಮೊದಲ ಹಂತದಲ್ಲಿ 38 ಶಾಸಕರು ಪಳನಿ ಸ್ವಾಮಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರು. ಇಂದಿನ ಮತದಾನ ಪ್ರಕ್ರಿಯೆಗೆ ಒಟ್ಟು 230 ಶಾಸಕರು ಆಗಮಿಸಿದ್ದರು.  ಬಹುಮತ ಸಾಬೀತು ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 10: 50ಕ್ಕೆ ವಿಧಾನಸಭೆಗೆ ಪಳನಿ ಸ್ವಾಮಿಯವರು ತಮ್ಮ ಸರ್ಕಾರದ ಸಚಿವರು, ಶಾಸಕರೊಂದಿಗೆ ವಿಧಾನಸಭೆ ಪ್ರವೇಶಿಸಿದ್ದರು. ಅವರ ಬೆನ್ನಲ್ಲೇ ಗೋಲ್ಡನ್ ಬೇ ರೆಸಾರ್ಸ್ ನಲ್ಲಿದ್ದ ಎಐಎಡಿಎಂಕೆ ನಾಯಕಿ ಶಶಿಕಲಾ ಅವರ ಬೆಂಬಲಿತ ಶಾಸಕರೂ ವಿಶೇಷ ಬಸ್ ನಲ್ಲಿ ವಿಧಾನಸಭೆಗೆ ಬಂದಿದ್ದರು.