ಜಿಲ್ಲೆಯಲ್ಲಿ 7 ರಿಂದ ಇಂದ್ರಧನುಷ ಲಸಿಕಾ ಅಭಿಯಾನ

ಜಿಲ್ಲೆಯಲ್ಲಿ 7 ರಿಂದ ಇಂದ್ರಧನುಷ ಲಸಿಕಾ ಅಭಿಯಾನ

ಬಾಗಲಕೋಟೆ, ನ. 7: ಜಿಲ್ಲೆಯಲ್ಲಿ ನವೆಂಬರ 7 ರಿಂದ ಮಕ್ಕಳಿಗೆ ಹಾಗೂ ಗರ್ಭಿಣೀಯರಿಗೆ ಇಂದ್ರಧನುಷ ಲಸಿಕಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಪಿ.ಎ.ಮೇಘಣ್ಣವರ ತಿಳಿಸಿದರು.
    ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಈ ಕುರಿತು ಜರುಗಿದ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇಂದ್ರಧನುಷ ಲಸಿಕಾ ಕಾರ್ಯಕ್ರಮದಡಿ ಗರ್ಭಿಣೀಯರಿಗೆ ಟಿಟಿ ಲಸಿಕೆ (ಧನುರ್ವಾಯು), ಎರಡು ವರ್ಷದ ಒಳಗಿನ ಮಕ್ಕಳಿಗೆ ಬಿಸಿಜಿ, ಪೋಲಿಯೋ, ದಡಾರ ಮತ್ತು ರುಬೆಲ್ಲಾ ಪ್ರತ್ಯೇಖ ಲಸಿಕೆ ಹಾಗೂ ಡಿಪಿಟಿ, ಹೈಪಟೈಟಿಸ್ ಬಿ ಮತ್ತು ಇನ್ಷ್ಲು ಯೆಂಜಾ-ಬಿ ಸೇರಿರುವ ಪೆಂಟಾವೆಲೆಂಟ್ ಹಾಗೂ 5 ರಿಂದ 6 ವರ್ಷದ ಮಕ್ಕಳಿಗೆ ಡಿಪಿಟಿ ಬೂಸ್ಟರ ಲಸಿಕೆಯನ್ನು ಜಿಲ್ಲೆಯಲ್ಲಿ ಆಯ್ದ ಸ್ಥಳಗಳಲ್ಲಿ ಉಚಿತವಾಗಿ ಹಾಕಲಾಗುತ್ತಿದೆ ಎಂದರು. 


    ಜಿಲ್ಲೆಯಲ್ಲಿ ಲಸಿಕೆಯಿಂದ ವಂಚಿತರಾದ ಗರ್ಭಿಣಿ ಹಾಗೂ ಮಕ್ಕಳಿರುವ ಪ್ರದೇಶವನ್ನು ಆಯ್ಕೆ ಮಾಡಲಾಗಿದ್ದು, 0 ರಿಂದ 2 ವರ್ಷದ ಒಟ್ಟು 1830 ಮಕ್ಕಳನ್ನು ಹಾಗೂ 774 ಗಭೀಣಿಯರಿಗೆ ವಿವಿಧ ತರಹದ ಲಸಿಕೆಯನ್ನು ಹಾಕಲಾಗುತ್ತಿದೆ ಎಂದರು. ಈ ಆಭಿಯಾನ ರಾಜ್ಯದಲ್ಲಿ 5 ಜಿಲ್ಲೆಗಳಲ್ಲಿ ಮಾತ್ರ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಈ ಐದು ಜಿಲ್ಲೆಗಳಲ್ಲಿ ಬಾಗಲಕೋಟೆ ಜಿಲ್ಲೆ ಒಂದಾಗಿದೆ ಎಂದರು. ಈ ಅಭಿಯಾನದ ಮೂಲಕ ಗುರುತಿಸಿದವರಿಗೆ ತಪ್ಪದೇ ಲಸಿಕೆ ಹಾಕಲು ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕೆಂದರು. 


    ಗುರುತಿಸಿರುವ ಪ್ರತಿಯೊಂದು ಶಾಲೆಯ ಪ್ರಾರ್ಥನಾ ಸಮಯದಲ್ಲಿ ಈ ಕುರಿತು ಜಾಗೃತಿ ಮೂಡಿಸಿ ಪಾಲಕರು ತಮ್ಮ ಮಕ್ಕಳಿಗೆ ವಿವಿಧ ತರಹದ ಲಸಿಕೆಯನ್ನು ಹಾಕಿಸಲು ಮುಂದಾಗುವಂತೆ ಕ್ರಮಕೈಗೊಳ್ಳಬೇಕು. ಸಂಪೂರ್ಣ ಲಸಿಕೆ ಪಡೆಯುವುದು ಪ್ರತಿ ಮಗುವಿನ ಜನ್ಮಸಿದ್ದ ಹಕ್ಕಾಗಿದ್ದು, ಪೋಷಕರು ಮಗುವಿಗೆ ಈ ಸಲಿಕೆಯನ್ನು ತಪ್ಪದೇ ಹಾಕಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡರು. ಗುರುತಿಸಿದ ಪ್ರದೇಶದಲ್ಲಿ ಇರುವ ಗರ್ಭಿಣಿ ಹಾಗೂ ಮಕ್ಕಳನ್ನು ಹೊರತುಪಡಿಸಿ ಉಳಿದವರಿಗೂ ಲಸಿಕೆ ಹಾಕುವ ಕಾರ್ಯವಾಗಬೇಕು. ಅಲ್ಲದೇ ವೈದ್ಯಕೀಯ ವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರಗಳಲ್ಲಿಯೂ ಸಹ ಉಚಿತವಾಗಿ ಲಸಿಕೆಯನ್ನು ಹಾಕುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. 
    ವಿಶ್ವ ಆರೊಗ್ಯ ಸಂಶೋಧನಾ ಸರ್ವೇಕ್ಷಣಾಧಿಕಾರಿ ಡಾ,ಮುಕುಂದ ಗಲಗಲಿ ಅವರು ಮಿಷನ್ ಇಂದ್ರಧನುಷ ಲಸಿಕಾ ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ಪಿಪಿಟಿಯ ಮೂಲಕ ಸಭೆಯಲ್ಲಿ ವಿವರಿಸಿದರು. ಇದೇ ಸಂದರ್ಭದಲ್ಲಿ ಇಂದ್ರಧನುಷ ಲಸಿಕಾ ಅಭಿಯಾನದ ಪೋಸ್ಟರಗಳನ್ನು ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಜಿ.ಪಂ ಸಿಇಓ ವಿಕಾಸ ಸುರಳಕರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಅನಂತ ರೆಡ್ಡಿ, ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ಗಂಜ್ಯಾಳ ಸೇರಿದಂತೆ ಆಯಾ ತಾಲೂಕಿನ ವೈದ್ಯಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅನಂತ ದೇಸಾಯಿ ಸ್ವಾಗತಿಸಿ ವಂದಿಸಿದರು.