ಬೆಂಗಳೂರು,ನ.27: ಮುಂದಿನ ಶೈಕ್ಷಣಿಕ ವರ್ಷದಿಂದ ರಾಜಧಾನಿಯ ಜಯದೇವ ಹೃದ್ರೋಗ ಸಂಸ್ಥೆ ಸೇರಿ ರಾಜ್ಯದ 14 ಸರ್ಕಾರಿ ಆಸ್ಪತ್ರೆಗಳಲ್ಲಿ ಡಿಪ್ಲೊಮೆಟ್ ಆಫ್ ನ್ಯಾಷನಲ್ ಬೋರ್ಡ್ (ಡಿಎನ್ಬಿ) ಕೋರ್ಸ್ ಆರಂಭವಾಗಲಿದೆ.
ಎಂಬಿಬಿಎಸ್ ಪೂರೈಸಿದ ವಿದ್ಯಾರ್ಥಿಗಳು ಈ ಕೋರ್ಸ್ ಪಡೆಯಲು ಅರ್ಹರು. ಇದು ಡಾಕ್ಟರ್ ಆಫ್ ಮೆಡಿಸಿನ್(ಎಂಡಿ) ಕೋರ್ಸ್ಗೆ ಸರಿಸಮವಾಗಿದೆ. ಡಿಎನ್ಬಿ ಕೋರ್ಸ್ಗಳನ್ನು ರಾಜ್ಯ 10 ಜಿಲ್ಲಾಸ್ಪತ್ರೆ ಹಾಗೂ ಬೆಂಗಳೂರು ನಗರದ ನಾಲ್ಕು ಆಸ್ಪತ್ರೆಗಳಲ್ಲಿ ತೆರೆಯಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ಹೀಗಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಮಿಷನ್(ಎನ್ಎಚ್ಎಂ) ಸಹಯೋಗದಲ್ಲಿ ಈ ಕೋರ್ಸ್ ಸರ್ಕಾರಿ ಆಸ್ಪತ್ರೆಯಲ್ಲಿ ಅನುಷ್ಠಾನಕ್ಕೆ ತರಲಾಗುತ್ತದೆ. ಈಗ ಜಯನಗರದ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆ ಸೇರಿ ಜಿಲ್ಲಾಮಟ್ಟದ ಮೂರು ಸರ್ಕಾರಿ ಆಸ್ಪತ್ರೆಯಲ್ಲಿ 2018ರ ಶೈಕ್ಷಣಿಕ ವರ್ಷದ ಆರಂಭದಿಂದ ಡಿಎನ್ಬಿ ಕೋರ್ಸ್ ಆರಂಭವಾಗಲಿದೆ.
ಧಾರವಾಡ, ವಿಜಯಪುರ, ಚಿತ್ರದುರ್ಗ, ಬಳ್ಳಾರಿ, ಬಾಗಲಕೋಟೆ, ಕೋಲಾರ, ತುಮಕೂರು ಮತ್ತು ಕಲಬುರಗಿಯ ಜಿಲ್ಲಾಸ್ಪತ್ರೆಗಳಲ್ಲಿ ಈ ಕೋರ್ಸ್ ಆರಂಭಿಸಲು ಚಿಂತಿಸಲಾಗಿದೆ. ರಾಜ್ಯ ಸರ್ಕಾರ ಜಿಲ್ಲಾಸ್ಪತ್ರೆಗಳನ್ನು ಉನ್ನತೀಕರಿಸುವ ಯೋಜನೆ ಹಾಕಿಕೊಂಡಿದೆ. ಹೀಗಾಗಿ ಸಿಟಿ ಸ್ಕ್ಯಾನಿಂಗ್ ಸೇರಿ ವಿವಿಧ ವೈದ್ಯಕೀಯ ಸೌಲಭ್ಯವನ್ನು ಒದಗಿಸುವ ವ್ಯವಸ್ಥೆಯನ್ನು ಮಾಡುತ್ತಿದೆ. ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿ ಡಿಎನ್ಬಿ ಕೋರ್ಸ್ ಆರಂಭಿಸುವುದರಿಂದ ಗ್ರಾಮೀಣ ಪ್ರದೇಶ ಅಭ್ಯರ್ಥಿಗಳು ಸುಲಭವಾಗಿ ಈ ಕೋರ್ಸ್ ಪೂರೈಸಬಹುದಾಗಿದೆ.
ಕೌಶಲಾಭಿವೃದ್ಧಿಗಾಗಿ ಹೊಸ ಕೋರ್ಸ್: ಎಂಬಿಬಿಎಸ್ ಪದವಿ ಪೂರೈಸಿದ ಅಭ್ಯರ್ಥಿಗಳಿಗೆ ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಕೌಶಲತೆಯನ್ನು ತುಂಬುವ ಉದ್ದೇಶದಿಂದ 14 ಸರ್ಕಾರಿ ಆಸ್ಪತ್ರೆಗಳಲ್ಲಿ ಡಿಎನ್ಬಿ 3 ವರ್ಷದ ಕೋರ್ಸ್ ಆರಂಭಿಸಲಾಗುತ್ತದೆ. ಬಯೊಕೆಮೆಸ್ಟ್ರಿ, ಎಮರ್ಜೆನ್ಸಿ ಮೆಡಿಸಿನ್, ಫಾರಿನ್ಸಿಕ್ ಮೆಡಿಸಿನ್, ಹೆಲ್ತ್ ಅಡ್ಮಿನಿಸ್ಟ್ರೇಷನ್, ಜನರಲ್ ಮೆಡಿಸಿನ್, ಜನರಲ್ ಸರ್ಜರಿ ಹೀಗೆ 25ಕ್ಕೂ ಅಧಿಕ ವಿಭಾಗದಲ್ಲಿ ಈ ಕೋರ್ಸ್ ಲಭ್ಯವಿದೆ. ಅದರೆ, ರಾಜ್ಯದ ಸರ್ಕಾರಿ ಆಸ್ಪತ್ರೆಯ ಸೌಲಭ್ಯ ಹಾಗೂ ಬೋಧಕ ವರ್ಗಕ್ಕೆ ಅನುಗುಣವಾಗಿ ಕೆಲವೊಂದು ವಿಭಾಗ ಮಾತ್ರ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಕೋರ್ಸ್ಗೆ ಸೇರಿದ ಅಭ್ಯರ್ಥಿಗಳಿಗೆ ಸರ್ಕಾರದಿಂದ ಶಿಷ್ಯವೇತನವೂ ಲಭ್ಯವಿದೆ.
Read more at https://www.udayavani.com/kannada/news/state-news/254505/14-dnb-course-at-government-hospital#CaWdTfpdIA4u9rek.99