ಅದ್ದೂರಿಯಾಗಿ ಜರುಗಿದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ಅದ್ದೂರಿಯಾಗಿ ಜರುಗಿದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ಬಾಗಲಕೋಟೆ, ಡಿ.5: ಕಾರ್ತಿಕೋತ್ಸವದ ಅಂಗವಾಗಿ ತಾಲ್ಲೂಕಿನ ಸುಕ್ಷೇತ್ರ ಮುಚಖಂಡಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು.
ಕಾರ್ತಿಕೋತ್ಸವದ ಅಂಗವಾಗಿ ವೀರಭದ್ರೇಶ್ವರನಿಗೆ ಪ್ರತಿದಿನ ರುದ್ರಾಭಿಷೇಕ ಹಾಗೂ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.ಜಾತ್ರೆಯ ನಿಮಿತ್ತ ದೊಡ್ಡ ರಥಕ್ಕೆ ಹಾಗೂ ಚಿಕ್ಕ ರಥಕ್ಕೆ ಹೂವಿನ ಹಾರಗಳಿಂದ ಅಲಂಕಾರ ಮಾಡಲಾಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ ಶುಕ್ರವಾರದಿಂದ ಮಂಗಳವಾರದ ವರೆಗೆ ಚಿಕ್ಕ ರಥೋತ್ಸವ ನೆರವೇರಿತು.ಮಂಗಳವಾರ ಸಾಯಂಕಾಲ ದೊಡ್ಡ ರಥೋತ್ಸವ ನಡೆಯಿತು.
ದೊಡ್ಡ ರಥೋತ್ಸವಕ್ಕೆ ಬೆಣ್ಣೂರ ಗ್ರಾಮದಿಂದ ಕಳಸವನ್ನು ಕರೆತರಲಾಯಿತು.ಅದೇ ರೀತಿ ವೀರಾಪುರ ಗ್ರಾಮದಿಂದ ದೊಡ್ಡ ರಥಕ್ಕೆ ಹಗ್ಗವನ್ನು ಮೆರವಣಿಗೆ ಮೂಲಕ ಎತ್ತಿನ ಗಾಡಿಯಲ್ಲಿ ತರಲಾಯಿತು.ನಂತರ ಸಂಜೆ ದೇವಸ್ಥಾನದಿಂದ ಗ್ರಾಮದ ವಿವಿಧ ಭಾಗದಿಂದ ಆಗಮಿಸಿದ್ದ ಮಹಿಳೆಯರ ಆರುತಿ,ಸಕಲ ವಾಧ್ಯ ವೈಭವದೊಂದಿಗೆ ಆರಂಭಗೊಂಡ ರಥೋತ್ಸವ ಗ್ರಾಮದ ಅಗಸಿ ಬಾಗಿಲಿನವರಿಗೆ ಆಗಮಿಸಿತು.
ಅಗಸಿ ಬಾಗಿಲಿಗೆ ಬಂದು ತಲುಪಿದ ರಥಕ್ಕೆ ದೂರದ ಊರಿನಿಂದ ಆಗಮಿಸಿದ್ದ ಭಕ್ತರು ಹಾಗೂ ಮುಚಖಂಡಿ ಗ್ರಾಮಸ್ಥರು ಪೂಜೆ ಸಲ್ಲಿಸಿ ಭಕ್ತಿಯನ್ನು ಅರ್ಪಿಸಿದರು.ಅಗಸಿ ಬಾಗಿಲಿನಿಂದ ಮತ್ತೆ ಆರಂಭಗೊಂಡ ರಥೋತ್ಸವ ಮರಳಿ ದೇವಸ್ಥಾನದ ಆವರಣವನ್ನು ತಲುಪಿತು.
ರಥೋತ್ಸವ ಮುಂದೆ ಸಾಗುತ್ತಿದ್ದಂತೆ ರಸ್ತೆಯ ಇಕ್ಕೆಲುಗಳಲ್ಲಿ ನಿಂತ ಭಕ್ತರು ಉತ್ತತ್ತಿ,ಚುರುಮುರಿ ಹಾಗೂ ಬಾಳೆ ಹಣ್ಣುಗಳನ್ನು ತೂರುವ ಮೂಲಕ ತಮ್ಮಲ್ಲಿರುವ ಬೇಡಿಕೆಗಳನ್ನು ಈಡೇರಿಸುವಂತೆ ಕೇಳಿಕೊಂಡರು.
ಜನಸ್ತೋಮ : ಸಂಜೆ ರಥೋತ್ಸವ ಜರುಗುವ ಸಮಯದಲ್ಲಿ ಜಿಲ್ಲೆ ಹಾಗೂ ವಿವಿಧ ಹೊರ ಜಿಲ್ಲೆಗಳಿಂದ ಭಕ್ತರು ತಮ್ಮ ವಾಹನ,ಟ್ರಾಕ್ಟರ್,ಎತ್ತಿನ ಗಾಡಿ,ಟಂಟಂ,ಕ್ರೂಸರ್ ಸೇರಿದಂತೆ ತಮ್ಮ ಖಾಸಗಿ ವಾಹನಗಳಲ್ಲಿ ಕುಟುಂಬ ಸಮೇತ ಜನರು ಆಗಮಿಸಿ ವೀರಭದ್ರೇಶ್ವರ ದರ್ಶನ ಪಡೆದರು.
ಬಂದ ಭಕ್ತರಿಗೆ ದೇವರ ದರ್ಶನ ಪಡೆಯಲು ಯಾವುದೇ ತೊಂದರೆಯಾಗದಂತೆ ಸರದಿಯಲ್ಲಿ ನಿಂತು ವೀರಭದ್ರೇಶ್ವರನ ದರ್ಶನ ಪಡೆಯಲು ಮುಚಖಂಡಿ ವೀರಭದ್ರೇಶ್ವರ ಜೀರ್ಣೋದ್ಧಾರ ಕಮೀಟಿಯವರು ವ್ಯವಸ್ಥೆ ಮಾಡಿದ್ದರು.
ಬಂದೋಬಸ್ತ್ : ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಸಹ ವಹಿಸಲಾಗಿತ್ತು.
ಇಂದು ಕುಸ್ತಿ ಪಂದ್ಯಾವಳಿ: ಮುಚಖಂಡಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ದಿ.6ರಂದು ಸಂಜೆ 4 ಗಂಟೆಗೆ ಸುಪ್ರಸಿದ್ಧ ಪೈಲವಾನರಿಂದ ಕುಸ್ತಿಗಳು ಜರುಗಲಿವೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಜಾತ್ರಾ ಮಹೋತ್ಸವ ಯಶಸ್ವಿಯಾಗಲು ಮುಚಖಂಡಿ ವೀರಭದ್ರೇಶ್ವರ ಜೀರ್ಣೋದ್ಧಾರ ಕಮೀಟಿಯವರು ಹಾಗೂ ಗ್ರಾಮದ ಹಿರಿಯರು,ಯುವಕರು ನೇತೃತ್ವ ವಹಿಸಿದ್ದರು.