ಪರಿಸರ ವರದಿಗಾರಿಕೆಗೆ ಪರಿಸರದ ಏರು-ಪೇರು, ಸಲಹೆಗಳ ಮಾಹಿತಿ ಅಗತ್ಯ: ಪ್ರೊ.ನರಸಿಂಹ ಮೂರ್ತಿ

ಪರಿಸರ ವರದಿಗಾರಿಕೆಗೆ ಪರಿಸರದ ಏರು-ಪೇರು, ಸಲಹೆಗಳ ಮಾಹಿತಿ ಅಗತ್ಯ: ಪ್ರೊ.ನರಸಿಂಹ ಮೂರ್ತಿ

ವಿಜಯಪುರ,ನ.20: ಪರಿಸರ ವರದಿಗಾರಿಕೆಗೆ ಪರಿಸರದ ಏರು-ಪೇರು,  ಅದರಿಂದಾಗುವ  ಸಮಸ್ಯೆಗಳು ಹಾಗೂ ಸೂಕ್ತ ಪರಿಹಾರ, ಸಲಹೆಗಳ ಮಾಹಿತಿ ಅಗತ್ಯ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರೊ.ನರಸಿಂಹ ಮೂರ್ತಿ ಅಭಿಪ್ರಾಯಪಟ್ಟರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಜ್ಞಾನಶಕ್ತಿ ಆವರಣದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಮಾದ್ಯಮ ಮನೆ ಚಟುವಟಿಕೆ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪರಿಸರ ವರದಿಗಾರಿಕೆ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಅಭಿವೃದ್ಧಿಯ ಸೂಚ್ಯಂಕದಲ್ಲಿ ಸ್ವಚ್ಛ ಪರಿಸರ ಕೂಡ ಒಂದು ಭಾಗವಾಗಿದೆ. ಆದ್ದರಿಂದ ಪರಿಸರ ವರದಿಗಾರಿಕೆ  ಮಾದ್ಯಮಗಳಲ್ಲಿ ಬಹಳ ಪ್ರಾಮುಖ್ಯತೆ ಪಡೆದಿದೆ. ಸಾಮಾನ್ಯ ಜ್ಞಾನ ಹೊಂದುವ ಜೊತೆಗೆ ಸಂಬಂಧಪಟ್ಟ ವಿಭಾಗಗಳಾದ ಹವಾಮಾನ, ಕೃಷಿ ಮತ್ತು ತೋಟಗಾರಿಕೆ, ಅರಣ್ಯ, ಸಾರಿಗೆ ಮತ್ತು ಸಂಪರ್ಕ ಇಲಾಖೆಗಳಿಂದ ಮಾಹಿತಿ ಸಂಗ್ರಹಿಸಿ, ಪರಿಸರದ ಕುರಿತಾದ ಒಳ್ಳೆಯ ವಿಶ್ವಾಸಾರ್ಹ ಲೇಖನ ಹಾಗೂ ವಿಶೇಷ ವರದಿಗಳನ್ನು ಪ್ರಕಟಿಸಲು ಸಾಧ್ಯ ಎಂದು ಅವರು ತಿಳಿಸಿದರು.
ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರತಿಯೊಂದು ವಿಷಯದ ಬಗ್ಗೆ ಮಾಹಿತಿ  ಅತ್ಯವಶ್ಯಕ. ಅಲ್ಲದೇ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಾವ ವಿಷಯದಲ್ಲಿ ವರದಿ ಮಾಡಲು ಬಯಸುತ್ತಾರೆಯೋ ಆ ಬಗ್ಗೆ ಆಳವಾಗಿ ಅಧ್ಯಯನ ಮಾಡಬೇಕೆಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ  ಪ್ರೊ.ಓಂಕಾರ ಕಾಕಡೆ, ಬೋಧಕ-ಬೋಧಕೇತರ ಸಿಬ್ಬಂದಿ, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.