ಕೈಗಾರಿಕೆ ನಿವೇಶನ ಅನ್ಯ ಬಳಕೆ ಸಲ್ಲದು : ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌

ಕೈಗಾರಿಕೆ ನಿವೇಶನ ಅನ್ಯ ಬಳಕೆ ಸಲ್ಲದು : ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌

ದಾವಣಗೆರೆ: ‘ದಾವಣಗೆರೆ ಮತ್ತು ಹರಿಹರ ಕೈಗಾರಿಕಾ ಪ್ರದೇಶಗಳಲ್ಲಿ ಈಗಾಗಲೇ ಹಂಚಿಕೆಯಾದ ನಿವೇಶನಗಳಲ್ಲಿ ಭಾಗಶಃ ನಿವೇಶನ ಉಪಯೋಗ ಮಾಡಿಕೊಂಡು ಉತ್ಪಾದನೆ ಆರಂಭಿಸದೇ ಇರುವ ಘಟಕಗಳ ಮುಖ್ಯಸ್ಥರಿಗೆ ನೋಟಿಸ್‌ ನೀಡಿ’ ಎಂದು ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಕಾರಿ ಡಿ.ಬಸವರಾಜಪ್ಪ ಅವರಿಗೆ ಖಡಕ್ಕಾಗಿ ಸೂಚಿಸಿದರು.   ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಿಲ್ಲಾ ಮಟ್ಟದ ಏಕ ಗವಾಕ್ಷಿ ಸಮಿತಿ ಸಭೆಯಲ್ಲಿ ಅವರು ಸೂಚನೆ ನೀಡಿದರು.  ‘ಕೈಗಾರಿಕೆ ನಿವೇಶನ ಮಂಜೂರು ಮಾಡಿ ಹಲವಾರು ವರ್ಷಗಳಾದರೂ ನಿವೇಶನ ಪಡೆದ ಕೆಲವರು ಉದ್ದಿಮೆ ಘಟಕಗಳನ್ನು ಆರಂಭಿಸಿಲ್ಲ. ಎಷ್ಟು ಘಟಕಗಳು ಆರಂಭವಾಗಿವೆ ಎನ್ನುವ ಬಗ್ಗೆ ವಿವರವಾದ ಮಾಹಿತಿ ನೀಡಿ’ ಎಂದು ಅಧಿಕಾರಿಯನ್ನು ಕೇಳಿದರು.  ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಬಸವರಾಜಪ್ಪ ಅವರು, ‘ನಿವೇಶನ ಪಡೆದು ಘಟಕ ಆರಂಭಿಸದ ಕೆಲ ಉದ್ದಿಮೆದಾರರಿಗೆ ಈಗಾಗಲೇ ನೋಟಿಸ್‌ ಜಾರಿ ಮಾಡಲಾಗಿದ್ದು, ಅವರು ಇನ್ನೂ 6 ತಿಂಗಳ ಕಾಲಾವಕಾಶ ಕೇಳಿದ್ದಾರೆ’ ಎಂದು ತಿಳಿಸಿದರು.   ‘ಈಗಾಗಲೇ ಆರಂಭವಾಗಿರುವ 15 ಕೈಗಾರಿಕಾ ಘಟಕಗಳಲ್ಲಿ ಸರೋಜಿನಿ ಮಹಿಷಿ ವರದಿ ಅನ್ವಯ ಒಟ್ಟು 3,144 ಕನ್ನಡಿಗರನ್ನು ವಿವಿಧ ಹಂತಗಳಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಇದಲ್ಲದೇ ಕೌಶಲ ಹೊಂದಿರುವ ಉದ್ಯೋಗಿಗಳ ಕೊರತೆ ಕೂಡ ಇದೆ’ ಎಂದು ಬಸವರಾಜಪ್ಪ ತಿಳಿಸಿದರು.  ‘ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಉಚಿತವಾಗಿ ಅಗತ್ಯ ಕೌಶಲ ತರಬೇತಿ ನೀಡುವುದರೊಂದಿಗೆ ಸರ್ಕಾರದಿಂದ ಮಾಸಿಕ ಶಿಷ್ಯವೇತನವನ್ನೂ ನೀಡಲಾಗುತ್ತದೆ. ಈ ಸೌಲಭ್ಯವಿದ್ದರೂ ತರಬೇತಿ ಪಡೆಯಲು ಜಿಲ್ಲೆಯ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಕೌಶಲ ಹೊಂದಿರುವ ಅನ್ಯ ರಾಜ್ಯಗಳ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ’ ಎಂದು ಬಿಡಿಟಿ ಎಂಜಿನಿಯರಿಂಗ್‌ ಕಾಲೇಜಿನ ನಿರ್ದೇಶಕ ವೈ.ವೃಷಭೇಂದ್ರಪ್ಪ ಮಾಹಿತಿ ನೀಡಿದರು. 

ಹರಿಹರ ಕೈಗಾರಿಕಾ ಪ್ರದೇಶ ಗಳಲ್ಲಿನ 20 ಕೈಗಾರಿಕೆ ನಿವೇಶನಗಳ ಮಾಲೀಕರಿಗೆ ಇದುವರೆಗೂ ಮಾರಾಟ ಹಕ್ಕುಪತ್ರ (ಸೇಲ್‌ ಡೀಡ್‌) ನೀಡಿಲ್ಲ. ಈ ಬಗ್ಗೆ ಕೆಎಸ್‌ಎಸ್‌ಐಡಿಸಿ ಅಧಿಕಾರಿಯಲ್ಲಿ ಹಲವು ಬಾರಿ ಮನವಿ ಮಾಡಿದರೂ ಸೇಲ್‌ ಡೀಡ್‌ ದೊರೆತಿಲ್ಲ’ ಎಂದು ಹರಿಹರ ಸಣ್ಣ ಕೈಗಾರಿಕೆ ಸಂಘದ ಅಧ್ಯಕ್ಷರು ದೂರಿದರು.   ‘ಉದ್ಯಮ ಘಟಕಗಳಿಗೆ ಮಂಜೂ ರಾದ ನಿವೇಶನಕ್ಕೆ ಸಂಬಂಧಿಸಿದಂತೆ ಮಾಲೀಕರು ಪ್ರತಿ ಚದರ ಅಡಿಗೆ ಹೆಚ್ಚುವರಿ ₹ 30 ನೀಡಿದರೆ, ಮಾರಾಟ ಹಕ್ಕುಪತ್ರ ನೀಡಲಾಗುವುದು’ ಎಂದು ಕೆಎಸ್‌ಎಸ್‌ಐಡಿಸಿ ಅಧಿಕಾರಿ ಸ್ಪಷ್ಟನೆ ನೀಡಿದರು.   ಇದಕ್ಕೆ ಪ್ರತಿಕ್ರಿಯಿಸಿದ ಹರಿಹರ ಸಣ್ಣ ಕೈಗಾರಿಕೆ ಸಂಘದ ಅಧ್ಯಕ್ಷ ಎ.ಆರ್.ನಾಯ್ಡು, ‘ಪ್ರತಿ ಚದರ ಅಡಿಗೆ ₹ 10ರಿಂದ ₹ 12ಕೊಡಲು ಸಿದ್ಧರಿದ್ದೇವೆ. ನಮಗೆ ನಿವೇಶನ ಮಾರಾಟದ ಹಕ್ಕುಪತ್ರ ನೀಡಬೇಕು’ ಎಂದು ಒತ್ತಾಯಿಸಿದರು.  ಇದಕ್ಕೆ ಸಮ್ಮತಿ ಸೂಚಿಸಿದ ಜಿಲ್ಲಾಧಿಕಾರಿ, ‘ನಿವೇಶನಕ್ಕೆ ಸಂಬಂಧಿ ಸಿದ ಹೆಚ್ಚುವರಿ ಹಣ ನೀಡಿದ ಉದ್ದಿಮೆ ದಾರರಿಗೆ ಮಾರಾಟ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಿ’ ಎಂದು ಸೂಚಿಸಿದರು.  ‘ಹರಿಹರ ಕೈಗಾರಿಕಾ ಪ್ರದೇಶದಲ್ಲಿ ಉಪಹಾರಗೃಹದ ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದು, ಕಟ್ಟಡದ ದುರಸ್ತಿಗೆ ಕ್ರಮಕೈಗೊಳ್ಳಬೇಕು’ ಎಂದು ಹರಿಹರ ಸಣ್ಣ ಕೈಗಾರಿಕೆ ಸಂಘದ ಅಧ್ಯಕ್ಷರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಈ ಬಗ್ಗೆ ಚಿಂತನೆ ನಡೆಸಿ, ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.   ‘ಕರೂರು ಕೈಗಾರಿಕಾ ಪ್ರದೇಶಗಳಲ್ಲಿ ಕೆಲ ಉದ್ದಿಮೆದಾರರು ತಮಗೆ ಮಂಜೂರಾದ ನಿವೇಶನದಲ್ಲಿ ಕಟ್ಟಡ ನಿರ್ಮಿಸಿ ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ ಎನ್ನುವ ಬಗ್ಗೆ ದೂರು ಇದ್ದು, ಅಂತಹವರನ್ನು ಗುರುತಿಸಿ ಅವರಿಗೆ ನೋಟಿಸ್‌ ಜಾರಿ ಮಾಡಿ, ಅದರ ತೆರವಿಗೆ ಕ್ರಮಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಕೆಎಸ್‌ಎಸ್‌ಐಡಿಸಿ ಅಧಿಕಾರಿಗೆ ಸೂಚಿಸಿದರು.   ಉಪ ವಿಭಾಗಾಧಿಕಾರಿ ಕುಮಾರ ಸ್ವಾಮಿ, ಭೂ ಸ್ವಾಧೀನಾಧಿಕಾರಿ ಮಂಜುನಾಥ, ಕೈಗಾರಿಕಾ ಸಂಘದ  ವೃಷಬೇಂದ್ರಪ್ಪ, ಚೇಂಬರ್ ಆಫ್ ಕಾಮರ್ಸ್‌ನ ಕಾರ್ಯದರ್ಶಿ ಶಂಭುಲಿಂಗಪ್ಪ, ಕೆಎಸ್‌ಐಡಿಸಿ ಸಹಾಯಕ ನಿರ್ದೇಶಕ ರಂಗಸ್ವಾಮಿ ಸೇರಿದಂತೆ ಕೆಐಎಡಿಬಿ ಮತ್ತು ಕೆಎಸ್‌ಎಸ್‌ಐಡಿಸಿ ಅಧಿಕಾರಿಗಳು ಹಾಗೂ ಉದ್ಯಮಿಗಳು ಉಪಸ್ಥಿತರಿದ್ದರು. 

ಅನಧಿಕೃತ ಅಂಗಡಿಗಳ ತೆರವಿಗೆ ಸೂಚನೆ  ‘ಕರೂರು ಕೈಗಾರಿಕಾ ಪ್ರದೇಶದಲ್ಲಿ ಹಂಚಿಕೆಯಾಗಿರುವ ನಿವೇಶನಗಳಲ್ಲಿ ಕಾನೂನು ಬಾಹಿರವಾಗಿ ಹೋಟೆಲ್‌, ಬಾಳೆಮಂಡಿ, ಅಗರಬತ್ತಿ ತಯಾರಿಕೆ, ಜೆರಾಕ್ಸ್‌ ಅಂಗಡಿ ಹಾಗೂ ಕಿರಾಣಿ ಅಂಗಡಿ ತೆರೆದಿರುವವರನ್ನು ತಕ್ಷಣ ತೆರವುಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಕೆಎಸ್‌ಎಸ್‌ಐಡಿಸಿ ಅಧಿಕಾರಿಗಳಿಗೆ ಸೂಚಿಸಿದರು.