ರಸಗೊಬ್ಬರ ಖರೀದಿಗೆ ಆಧಾರ ಕಡ್ಡಾಯ

ರಸಗೊಬ್ಬರ ಖರೀದಿಗೆ ಆಧಾರ ಕಡ್ಡಾಯ

ವಿಜಯಪುರ,ಡಿ.31: ಕೇಂದ್ರ ಸರ್ಕಾರ ರಸಗೊಬ್ಬರಗಳ ಮಾರಾಟದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ರೈತ ಫಲಾನುಭವಿಗೆ ರಸಗೊಬ್ಬರ ತಲುಪುವುದನ್ನು ಖಾತ್ರಿಪಡಿಸಿಕೊಳ್ಳಲು ನೇರ ನೆರವು ವರ್ಗಾವಣೆ (ಡೈರೆಕ್ಟ ಬೆನೆಫಿಟ್ ಟ್ರಾನ್ಸಫರ್ – ಡಿ. ಬಿ. ಟಿ) ಯೋಜನೆಯನ್ನು ದೇಶದಾದ್ಯಂತ ಜಾರಿಗೊಳಿಸುತ್ತಿದೆ. ರಾಜ್ಯದಲ್ಲಿ ಜನೆವರಿ 1 ರಿಂದ  ಈ ಯೋಜನೆ ಜಾರಿಗೊಳಿಸಲಾಗುತ್ತಿದೆ.
ಈ ಯೋಜನೆ ಅನುಷ್ಠಾನಕ್ಕೆ ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ 304 ಚಿಲ್ಲರೆ ಮಾರಾಟಗಾರರಿಗೆ (ಪಾಯಿಂಟ ಆಫ್ ಸೇಲ್ - ಪಿ.ಓ.ಎಸ್) ಉಪಕರಣ ವಿತರಿಸಲಾಗಿದೆ, ಚಿಲ್ಲರೆ ಮಾರಾಟಗಾರರು ತಮ್ಮಲ್ಲಿರುವ ಸಹಾಯ ಧನ ನೀಡಲ್ಪಡುವ ರಸಗೊಬ್ಬರಗಳನ್ನು ಈ ಉಪಕರಣದ ಮುಖಾಂತರವೇ ಕಡ್ಡಾಯವಾಗಿ ಮಾರಾಟ ಮಾಡಲು ಸೂಚಿಸಲಾಗಿದೆ. ಒಂದು ವೇಳೆ ಪಿ.ಓ.ಎಸ್ ಬಳಸದೆ ಮಾರಾಟ ಮಾಡಿದರೆ, ಅಂತಹ ಮಾರಾಟಗಾರರ ರಸಗೊಬ್ಬರ ಮಾರಾಟ ಪರವಾನಗಿಯನ್ನು ಯಾವುದೇ ನೋಟೀಸ್ ನೀಡದೇ ರದ್ದುಗೊಳಿಸಲಾಗುತ್ತದೆ. ಈ ಉಪಕರಣದ ಮೂಲಕ ಮಾರಾಟ ಮಾಡಿರುವ ರಸಗೊಬ್ಬರಗಳ ಪ್ರಮಾಣಕ್ಕೆ ಮಾತ್ರ ಸಹಾಯಧನವನ್ನು ಆಯಾ ರಸಗೊಬ್ಬರ ತಯಾರಿಕಾ ಸಂಸ್ಥೆಗಳಿಗೆ ನೀಡಲಾಗುತ್ತದೆ.
ಚಿಲ್ಲರೆ ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಎಮ್.ಎಫ್.ಎಮ್.ಎಸ್, ಆಯ್.ಡಿ ಪಡೆದು, ಪಿ.ಓ.ಎಸ್ ಉಪಕರಣದಲ್ಲಿ ಹಾಲಿ ಇರುವ ದಾಸ್ತಾನನ್ನು ಕೃಷಿ ಇಲಾಖೆಯಿಂದ ದಾಖಲಿಸಿ ಕಡ್ಡಾಯವಾಗಿ ಪಿ.ಓ.ಎಸ್ ಉಪಕರಣದ ಮುಖಾಂತರವೇ ರಸಗೊಬ್ಬರ ವಿತರಿಸಲು ಎಚ್ಚರಿಕೆ ನೀಡಲಾಗಿದೆ. ಇಲ್ಲದಿದ್ದರೆ ರಸಗೊಬ್ಬರ ನಿಯಂತ್ರಣ ಕಾಯ್ದೆಯನ್ವಯ ಕಾನೂನಿನ ಕ್ರಮ ಜರುಗಿಸಲಾಗುವುದು.
ರಸಗೊಬ್ಬರಗಳ ಒಟ್ಟು ಬೆಲೆ ನೀಡಿ ಖರೀದಿಸಲು ರೈತರಿಗೆ ದುಬಾರಿಯಾಗುತ್ತದೆ ಎಂಬ ಕಾರಣದಿಂದ ರೈತರು ಸಬ್ಸಿಡಿ ದರದಲ್ಲಿಯೇ ಮಾರಾಟ ಬೆಲೆ (ಎಂ.ಆರ್.ಪಿ) ಪಾವತಿಸಿ ಖರೀದಿಸಲು ಅನುವು ಮಾಡಿಕೊಡಲಾಗಿದೆ. ಪಿ.ಓ.ಎಸ್ ಯಂತ್ರದಲ್ಲಿ ದಾಖಲಾದ ರಸಗೊಬ್ಬರದ ಚಿಲ್ಲರೆ ಮಾರಾಟದ ಅಂಕಿ ಅಂಶ ಆಧರಿಸಿ ಕಂಪನಿಗಳಿಗೆ ಸಬ್ಸಿಡಿ ವರ್ಗಾಯಿಸಲಾಗುತ್ತದೆ. ರಸಗೊಬ್ಬರಗಳನ್ನು ಪಿ.ಓ.ಎಸ್ ಉಪಕರಣದ ಮುಖಾಂತರ ಖರೀದಿಸಲು ರೈತರು ಕಡ್ಡಾಯವಾಗಿ ತಮ್ಮ ಆಧಾರ್ ಸಂಖ್ಯೆ ನೀಡಬೇಕು. ಪ್ರತಿ ಸೌಲಭ್ಯಕ್ಕೂ ಆಧಾರ್ ಸಂಖ್ಯೆ ಅಗತ್ಯವಾಗಿರುವುದರಿಂದ ರೈತರು ತಮ್ಮಲ್ಲಿ ಆಧಾರ್ ಸಂಖ್ಯೆ ಇಟ್ಟುಕೊಳ್ಳುವುದು ಉತ್ತಮ ರೈತರು ರಸಗೊಬ್ಬರಗಳನ್ನು ಖರೀದಿಸಲು ತಪ್ಪದೇ ಆಧಾರ ಸಂಖ್ಯೆ ನೀಡಿ ಸಹಕರಿಸಬೇಕೆಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಬಿ. ಮಂಜುನಾಥ ರವರು  ಪ್ರಕಟಣೆ ಮೂಲಕ ತಿಳಿಸಿದ್ದಾರೆ.